ADVERTISEMENT

ಕಾರವಾರ ವೈದ್ಯಕೀಯ ಕಾಲೇಜಿಗೆ 52 ಪಿ.ಜಿ ಸೀಟು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 14:18 IST
Last Updated 2 ಸೆಪ್ಟೆಂಬರ್ 2022, 14:18 IST
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕ್ರಿಮ್ಸ್) ಈ ಬಾರಿ 52 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಸರ್ಕಾರದ ಮೆರಿಟ್ ಆಧಾರದಲ್ಲಿ ಹಂಚಿಕೆಯಾಗಿವೆ.

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯ (ಎಂ.ಸಿ.ಸಿ) ‘ನೀಟ್’ ಕೌನ್ಸೆಲಿಂಗ್ ಗುರುವಾರ ನಡೆಯಿತು. ಅದರಲ್ಲಿ ಎಂ.ಬಿ.ಬಿ.ಎಸ್ ತೇರ್ಗಡೆ ಹೊಂದಿರುವವರನ್ನು ಸರ್ಕಾರಿ ಕೋಟಾದಡಿಯಲ್ಲಿ ‘ಕ್ರಿಮ್ಸ್’ಗೆ ಹಂಚಿಕೆ ಮಾಡಲಾಯಿತು.

ಅಂಗರಚನಾ ಶಾಸ್ತ್ರ, ಜೀವರಸಾಯನ ಶಾಸ್ತ್ರ, ನ್ಯಾಯ ವೈದ್ಯಶಾಸ್ತ್ರ, ಮಿನಿ ಜೀವಶಾಸ್ತ್ರ ಮತ್ತು ಶರೀರ ಕ್ರಿಯಾ ಶಾಸ್ತ್ರ ವಿಭಾಗದಲ್ಲಿ ತಲಾ ಐದು ಸೀಟುಗಳು ಲಭಿಸಿವೆ. ಜನರಲ್ ಮೆಡಿಸಿನ್‌, ಶಸ್ತ್ರ ಚಿಕಿತ್ಸೆ, ಅರಿವಳಿಕೆ, ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ ಹಾಗೂಔಷದ ವಿಜ್ಞಾನ ಶಾಸ್ತ್ರ ವಿಭಾಗಕ್ಕೆ ತಲಾ ಮೂರು ಸೀಟುಗಳು ಹಂಚಿಕೆಯಾಗಿವೆ.

ADVERTISEMENT

ಚಿಕ್ಕ ಮಕ್ಕಳ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ರೋಗ ಲಕ್ಷಣ ಶಾಸ್ತ್ರ ವಿಭಾಗ ಮತ್ತು ಸಮುದಾಯ ವೈದ್ಯಶಾಸ್ತ್ರ ವಿಭಾಗದಲ್ಲಿ ತಲಾ ಎರಡು ಸೀಟುಗಳು ಮಂಜೂರಾಗಿವೆ.

‘ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಮೂರು ವರ್ಷಗಳ ಕರ್ತವ್ಯದೊಂದಿಗೆ ಪ್ರಬಂಧ ಪ್ರಕಟಿಸಬೇಕು. ಒಂದು ವರ್ಷ ಸೀನಿಯರ್ ರೆಸಿಡೆಂಟ್ ವೈದ್ಯರಾಗಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ನಂತರ ಅವರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಮೊದಲ ವರ್ಷ ₹ 45 ಸಾವಿರ, ಎರಡನೇ ವರ್ಷ ₹ 50 ಸಾವಿರ, ಮತ್ತು ಮೂರನೇ ವರ್ಷ ₹ 55 ಸಾವಿರದಂತೆ ಪ್ರತಿ ತಿಂಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ’ ಎಂದು ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

‘15 ವರ್ಷಗಳ ಈಚೆಗೆ ಸ್ಥಾಪನೆಯಾದ ವೈದ್ಯಕೀಯ ಕಾಲೇಜುಗಳ ಪೈಕಿ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಮುಂಚೂಣಿಯಲ್ಲಿದೆ. ಇದು ಶ್ಲಾಘನೀಯ’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಸುಜಾತಾ ಸಂಸ್ಥೆಯ ಆಡಳಿತವನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.