ಕಾರವಾರ: ‘ಅನಧಿಕೃತವಾಗಿ ನಡೆಸಲಾಗುತ್ತಿರುವ ಹೋಮ್ ಸ್ಟೇಗಳ ಕುರಿತು ವಿವರವಾದ ವರದಿಯನ್ನು ಒಂದು ವಾರದ ಒಳಗೆ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಸಿದ ಅವರು, ‘ಹೋಮ್ ಸ್ಟೇಗಳ ಕುರಿತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಿಂದ ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಿ. ಅವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಲೆಹಾಕಿ, ಕ್ರೋಢೀಕೃತ ವರದಿ ಸಲ್ಲಿಸಿ’ ಎಂದರು.
‘ಟ್ಯಾಗೋರ್ ಕಡಲತೀರದಲ್ಲಿರುವ ಟುಪಲೋವ್ ಯುದ್ದ ವಿಮಾನ ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಬೇಕು. ಬಾಕಿ ಇರುವ ಅಗತ್ಯ ಕಾಮಗಾರಿ ಮತ್ತು ಅನುಮತಿಗಳನ್ನು ಪಡೆದು, ಸುರಕ್ಷತಾ ಕ್ರಮಗಳನ್ನು ದೃಢೀಕರಿಸಿಕೊಂಡು ಈ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
‘ಕಡಲತೀರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಸುರಕ್ಷತಾ ಸಲಕರಣೆಗಳನ್ನು ಒದಗಿಸಲು ಕ್ರಮವಾಗಬೇಕು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಉಪ ವಿಭಾಗಾಧಿಕಾರಿ ಕನಿಷ್ಕ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್.ವಿ.ಜಯಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.