ADVERTISEMENT

ಮುಖಗವಸು ಧರಿಸದಿದ್ದರೆ ಹಳ್ಳಿಯಲ್ಲೂ ದಂಡ

ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:30 IST
Last Updated 19 ಸೆಪ್ಟೆಂಬರ್ 2020, 16:30 IST

ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ಕೂಡ ಜನ ಗುಂಪಾಗಿ ಸೇರುವ ಸ್ಥಳಗಳಲ್ಲಿ ಮುಖಗವಸು ಧರಿಸದಿದ್ದರೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಅವರು ಶುಕ್ರವಾರ ವಿಡಿಯೊ ಸಂವಾದ ನಡೆಸಿದರು.

‘ನಗರ ಪ್ರದೇಶದಲ್ಲಿ ಸಾರ್ವಜನಿಕರು ಮುಖಗವಸು ಧರಿಸುವುದನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲೂ ಕ್ರಮ ಕೈಗೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ಆದರೆ, ಮುಖಗವಸು ಧರಿಸುವುದು ಸುಲಭೋಪಾಯ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ನಿಯಮ ಮೀರಿದವರಿಗೆ ದಂಡ ವಿಧಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಕೋವಿಡ್ 19 ಪರೀಕ್ಷೆ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಒಂದು ಪಾಸಿಟಿವ್ ಕೇಸ್ ಕಂಡುಬಂದಲ್ಲಿ ಅಲ್ಲಿ ಕನಿಷ್ಠ 10 ಮಂದಿಗಾದರೂ ಪರೀಕ್ಷೆ ಆಗಬೇಕು. ಯಾವುದೇ ರೋಗ ಲಕ್ಷಣವಿಲ್ಲದಿದ್ದರೆ ಮನೆಯಲ್ಲೇ ಪ್ರತ್ಯೇಕವಾಗಿರಬಹುದು. ರೋಗ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆ ದಾಖಲಾಗಲು ಸೂಚಿಸಬೇಕು. ಪ್ರತಿ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯಲು ಕ್ರಮ ಕೈಗೊಳ್ಳಬೇಕು. ಕೋವಿಡ್ ಹೊರತಾದ ರೋಗಿಗಳ ಬಗ್ಗೆಯು ಅಷ್ಟೇ ಪ್ರಾಮುಖ್ಯ ನೀಡಬೇಕು’ ಎಂದು ತಿಳಿಸಿದರು.

‘ಕೋವಿಡ್ ರೋಗಿಗೆಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಶಿಷ್ಟಾಚಾರದಂತೆ ಚಿಕಿತ್ಸೆ ನೀಡಬೇಕು. ಆಧುನಿಕ ಚಿಕಿತ್ಸಾ ವಿಧಾನಗಳನ್ನೆಲ್ಲ ತುರ್ತಾಗಿ ಬಳಸಿಕೊಳ್ಳಬೇಕು. ಪಕ್ಕದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಈ ಜಿಲ್ಲೆಯ ರೋಗಿಗಳ ಚಿಕಿತ್ಸೆಗೆ ದಾಖಲಾಗುವುದು ಕಷ್ಟವಾಗಿದೆ. ಜನರಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲು ಎಲ್ಲ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ‌

‘ಎಲ್ಲ ರೋಗಿಗಳನ್ನು ಕಾರವಾರ ಆಸ್ಪತ್ರೆಗೆ ಕಳುಹಿಸಲು ಮುಂದಾಗದೆ, ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಆನ್‌ಲೈನ್ ಮೂಲಕ ಹಿರಿಯ ವೈದ್ಯರ ನೆರವು ಪಡೆಯಬೇಕು. ಸ್ಥಳೀಯವಾಗಿದ್ದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ. ಅದೇ ರೀತಿ ಗುಣಮುಖರಾಗಿ ಮನೆಗೆ ಮರಳಿದವರ ಬಗ್ಗೆಯೂ ಗಮನ ಹರಿಸಬೇಕು’ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.