ಯಲ್ಲಾಪುರ: ಬಿಸಿಲಿನ ತಾಪ ಒಂದೇ ಸಮನೆ ಏರುತ್ತಿರುವಂತೆ ತಾಲ್ಲೂಕಿನ ಅಲ್ಲಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿದ ಘಟನೆಗಳು ವರದಿಯಾಗುತ್ತಿವೆ. ಮಾರ್ಚ್ ತಿಂಗಳ ಆರಂಭದಿಂದಲೂ ಇಡಗುಂದಿ ವಲಯದ ಅರಬೈಲ್ ಘಟ್ಟದ ಅಕ್ಕಪಕ್ಕದ ಅರಣ್ಯ ಪ್ರದೇಶದ ಕೆಲವು ಕಡೆ ಬೆಂಕಿ ಬೀಳುತ್ತಿದೆ.
ಅರಣ್ಯ ಇಲಾಖೆ ಹರಸಾಹಸಪಟ್ಟು ಒಂದೆಡೆ ಬೆಂಕಿ ನಂದಿಸುವಷ್ಟರಲ್ಲಿ ಇನ್ನೊಂದೆಡೆ ಬೆಂಕಿ ಬೀಳುತ್ತಿದೆ. ಬೆಂಕಿ ನಂದಿಸುವುದು ಒಂದು ಸವಾಲಾಗಿದೆ. ಈಚೆಗೆ ಪಟ್ಟಣದ ನಿಸರ್ಗಮನೆ ಸಮೀಪದ ಅರಣ್ಯಕ್ಕೆ ಬೆಂಕಿಬಿದ್ದು ಮೇಲ್ಬಾಗದ ಕುರುಚಲು ಗಿಡಗಳು ಸುಟ್ಟಿದ್ದವು. ತೇಲಂಗಾರ ಸಮೀಪದ ಗೋಡೆಪಾಲ ಅರಣ್ಯಕ್ಕೆ ಬೆಂಕಿಬಿದ್ದಿತ್ತು. ತೇಲಂಗಾರದಿಂದ ಬಾಗಿನಕಟ್ಟಾಕ್ಕೆ ಹೋಗುವ ರಸ್ತೆಯ ಪಕ್ಕದ ಅರಣ್ಯದ ಇಕ್ಕೆಲದ ಗಿಡಗಂಟಿಗಳು ಬೆಂಕಿಗೆ ಆಹುತಿಯಾಗಿದ್ದವು.
ಅರಬೈಲು ಘಟ್ಟದಲ್ಲಿ ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದ ಸಮೀಪ ಬೆಂಕಿಬಿದ್ದ ಪರಿಣಾಮ ಚಿಗುರುತ್ತಿದ್ದ ಸಣ್ಣ ಸಣ್ಣ ಗಿಡಗಳು ಒಣಗಿನಿಂತಿವೆ. ದೊಡ್ಡ ಹಾನಿ ಸಂಭವಿಸಿಲ್ಲ ಎಂದು ಮೇಲ್ನೋಟಕ್ಕೆ ಅನಿಸಿದರೂ ಕಾಡಿನ ಪ್ರಾಣಿಗಳ ಬದುಕನ್ನು ಕಿತ್ತುಕೊಂಡಿದೆ. ಹಾವುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸತ್ತು ಬಿದ್ದಿವೆ. ತಪ್ಪಿಸಿಕೊಂಡು ಓಡಿ ಜೀವ ಉಳಿಸಿಕೊಂಡ ಹಾವುಗಳು ಹತ್ತಿರದ ತಂಪು ಪ್ರದೇಶದ ಮನೆ, ತೋಟದ ಸುತ್ತಮುತ್ತ ದಾಳಿಯಿಟ್ಟಿವೆ.
‘ಕಳೆದ ಆರೇಳು ವರ್ಷಗಳಿಂದ ಬೆಂಕಿ ಬೀಳದ ಕಾರಣ ಚಿಗಿತ ಎಲೆ, ಗೊಬ್ಬರದಿಂದ ತುಂಬಿ ನಿಂತಿದ್ದ ಅರಣ್ಯದ ಮೇಲ್ಷ್ಮೈ ವಿರೂಪಗೊಂಡಿದೆ. ಮರದ ಬೇರುಗಳಿಗೆ ಹಾನಿಯಾಗಿದ್ದು ಅವು ಸಡಿಲಗೊಂಡು ಗಾಳಿಗೆ ಕುಸಿದು ಬೀಳುವ ಸಾಧ್ಯತೆಯಿದೆ. ಎಲೆಗಳು ಸುಟ್ಟಕಾರಣ ಮಳೆಗಾಲದಲ್ಲಿ ನೀರಿಂಗುವ ಸಹಜ ಸಾಧ್ಯತೆ ಇಲ್ಲವಾಗಿದ್ದು ಅಂತರ್ಜಲ ಕಡಿಮೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.