ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದಲ್ಲಿ ನಿರ್ಮಾಣಗೊಂಡ ಮೀನು ಮಾರುಕಟ್ಟೆ ಬಳಕೆಗೆ ಬಾರದೆ ಪಾಳು ಬಿದ್ದಿದ್ದು ಒಂದೆಡೆಯಾದರೆ, ಪ್ರವಾಸಿಗರು ಓಡಾಟ ನಡೆಸುವ ರಸ್ತೆಯೇ ಮಾರುಕಟ್ಟೆಯಂತಾಗಿರುವ ಪರಿಣಾಮ ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸಿರುವ ದೂರುಗಳಿವೆ.
ಇಲ್ಲಿ ಮೀನು ಮಾರಾಟಕ್ಕೆ ರಸ್ತೆ ಬದಿಯೇ ಮುಖ್ಯ ಸ್ಥಳವಾಗಿದೆ. ಮುಖ್ಯ ಕಡಲತೀರಕ್ಕೆ ಹೋಗುವ ರಸ್ತೆ ಮೀನು ಮಾರುಕಟ್ಟೆ ರಸ್ತೆ ಎಂದೇ ಪ್ರಸಿದ್ದಿ ಪಡೆದಿದೆ. ಅದೇ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡಲಾಗುತ್ತಿದೆ. ಮುಖ್ಯ ಸಮುದ್ರ ತೀರದಲ್ಲಿ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ನೂತನ ಮೀನು ಮಾರುಕಟ್ಟೆ ಕಟ್ಟಲ್ಪಟ್ಟರೂ, ಮೀನುಗಾರರು ಬಳಸದೇ ನಿರುಪಯುಕ್ತವಾಗಿದೆ.
‘ಸದ್ಯ ಮೀನು ಮಾರಾಟ ಮಾಡುತ್ತಿರುವ ಸ್ಥಳ ಮೀನು ಮಾರಾಟಗಾರರಿಗೆ ಮತ್ತು ಮೀನು ಕೊಳ್ಳುವವರಿಗೆ ಅನುಕೂಲವಾಗಿಲ್ಲದಿದ್ದರೂ ಆ ಸ್ಥಳ ಬಿಟ್ಟು ಬೇರೆಡೆಗೆ ಹೋಗಲು ಮೀನುಗಾರರು ಒಪ್ಪುತ್ತಿಲ್ಲ. ಅದೇ ರಸ್ತೆ ಸಮುದ್ರಕ್ಕೂ ಕೂಡುವ ರಸ್ತೆಯಾಗಿರುವ ಕಾರಣದಿಂದ ವಾಹನಗಳ ಸಂಚಾರ ಹೆಚ್ಚು. ಗುಡ್ಡದ ಮೇಲಿನಿಂದ ಬರುವ ವಾಹನಗಳು ಪಾರ್ಕಿಂಗ್ ಸ್ಥಳದಿಂದ ಮುಖ್ಯ ರಸ್ತೆಗೆ ಹೊಗಲೂ ಇದೇ ಮಾರ್ಗವಾಗಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ನಿರಂತರವಾಗಿದೆ’ ಎನ್ನುತ್ತಾರೆ ಸ್ಥಳೀಯರು.
‘ಸುಮಾರು ₹40 ಲಕ್ಷ ವೆಚ್ಚದಲ್ಲಿ ಮುಖ್ಯ ಸಮುದ್ರ ತೀರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿ ಹಲವು ಸಮಯವಾಗಿದೆ. ಆದರೆ ಮೀನುಗಾರರು ಇನ್ನೂ ನೂತನ ಕಟ್ಟಡವನ್ನು ಉಪಯೋಗಿಸುತ್ತಿಲ್ಲ. ಕಟ್ಟಡ ಪಾಳು ಬೀಳುತ್ತಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದರಿಂದ ಈ ಭಾಗದ ಪರಿಸರ ಹದಗೆಡುತ್ತಿದೆ’ ಎಂದು ದೂರಿದರು.
‘ಮುಖ್ಯ ಕಡಲತೀರದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಂಸದರ ನಿಧಿಯಿಂದ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳು ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಾಳುಗೆಡವಿದ್ದಾರೆ. ಮಾರುಕಟ್ಟೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಶಾಸಕರೊಂದಿಗೂ ಚರ್ಚಿಸಲಾಗಿದೆ’ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮಂಜುನಾಥ ಜನ್ನು ಹೇಳಿದರು.
ರಸ್ತೆ ಬದಿಯಲ್ಲೇ ಮೀನು ಮಾರಾಟದಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ. ಮೀನುಗಾರರು ನೂತನ ಮೀನು ಮಾರುಕಟ್ಟೆಯನ್ನು ಮೀನು ಮಾರಾಟಕ್ಕೆ ಬಳಕೆ ಮಾಡಿದರೆ ಸಮಸ್ಯೆ ಬಗೆಹರಿಯಬಹುದುಪ್ರಭಾಕರ ಪ್ರಸಾದ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.