ಕಾರವಾರ: ಮೀನುಗಾರಿಕೆ ಪರಿಕರ ಇರಿಸಲು ಇಲ್ಲಿನ ಲಂಡನ್ ಸೇತುವೆ ಬಳಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ್ದ ಶೆಡ್ ಮಳೆ ಗಾಳಿ, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಶಿಥಿಲಾವಸ್ಥೆಗೆ ತಲುಪಿದೆ.
ಕಡಲತೀರದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ನೆಲಸಮಗೊಳಿಸಿದ್ದ ಜಿಲ್ಲಾಡಳಿತವು, ಅದಕ್ಕೆ ಪರ್ಯಾಯವಾಗಿ 2016ರಲ್ಲಿ ಈ ಶೆಡ್ ನಿರ್ಮಿಸಿಕೊಟ್ಟಿತ್ತು. ಮೀನುಗಾರರ ವಿರೋಧದ ನಡುವೆಯೂ ನಿರ್ಮಾಣಗೊಂಡಿದ್ದ ಶೆಡ್ ಕೆಲ ವರ್ಷಗಳಲ್ಲೇ ಬಳಕೆಗೆ ಬಾರದ ಸ್ಥಿತಿಗೆ ತಲುಪಿರುವುದಕ್ಕೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.
ಏಕಕಾಲಕ್ಕೆ ಸುಮಾರು 8 ರಿಂದ 10 ದೋಣಿಗಳ ಪರಿಕರ ಇರಿಸುವಷ್ಟು ವಿಶಾಲವಾದ ಎರಡು ಶೆಡ್‌ಗಳು ಇಲ್ಲಿವೆ. ಆದರೆ, ಅವುಗಳ ಚಾವಣಿಗೆ ಅಳವಡಿಸಿದ್ದ ಒಂದೇ ಒಂದು ಶೀಟು ಉಳಿದುಕೊಂಡಿಲ್ಲ. ಶೆಡ್‌ನ ನೆಲಹಾಸು ಕೂಡ ಒಡೆದಿದ್ದು, ಸುತ್ತಲೂ ಗಿಡಗಂಟಿಗಳು ಬೆಳೆದುನಿಂತಿವೆ.
‘ಮಳೆ ಬೀಳುವ, ಗಾಳಿ ಬೀಸುವ ದಿಕ್ಕಿನಲ್ಲೇ ಶೆಡ್ ನಿರ್ಮಿಸಲಾಗಿತ್ತು. ಎತ್ತರದಲ್ಲಿ ಚಾವಣಿ ಅಳವಡಿಸಿದ್ದು, ಗಾಳಿಯ ರಭಸಕ್ಕೆ ಮಳೆನೀರೆಲ್ಲ ಒಳಕ್ಕೆ ನುಗ್ಗುವ ಹಾಗೆಯೇ ಇತ್ತು. ಈ ಕಾರಣಕ್ಕೆ ಆರಂಭದಲ್ಲೇ ಆಕ್ಷೇಪಿಸಿದ್ದೆವು. ನಮ್ಮ ಅಭಿಪ್ರಾಯ ಆಲಿಸದೆ ಕಾಟಾಚಾರಕ್ಕೆ ಶೆಡ್ ನಿರ್ಮಿಸಿದ್ದರು. ಪಕ್ಕದಲ್ಲಿದ್ದ ಹತ್ತಾರು ಗುಡಿಸಲುಗಳನ್ನು ತೆರವುಗೊಳಿಸಿದ್ದ ಕಾರಣಕ್ಕೆ ಸಮಾಧಾನಗೊಳಿಸಲು ಈ ಶೆಡ್ ನಿರ್ಮಾಣವಾಯಿತೇ ಹೊರತು, ಮೀನುಗಾರರ ಉಪಯೋಗಕ್ಕೆ ಸಿಕ್ಕಿದ್ದು ಅಪರೂಪ’ ಎಂದು ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಕಡಲತೀರದ ಮೂಲೆಯೊಂದರಲ್ಲಿ ಶೆಡ್ ನಿರ್ಮಿಸಿದ್ದು, ಇಲ್ಲಿಗೆ ಪರಿಕರ ಒಯ್ಯಲೂ ಕಷ್ಟವಾಗಿದೆ. ಇದೇ ಜಾಗದಿಂದ ಸ್ವಲ್ಪ ದೂರದಲ್ಲಿ ಶೆಡ್ ನಿರ್ಮಾಣಕ್ಕೆ ಅನುಕೂಲ ಸ್ಥಳವಿದ್ದರೂ ನಿರ್ಲಕ್ಷಿಸಲಾಗಿದೆ. ಅಲಿಗದ್ದಾ ಕಡಲತೀರದಲ್ಲಿಯೂ 50ಕ್ಕೂ ಹೆಚ್ಚು ನಾಡ ದೋಣಿಗಳಿದ್ದು ಅಲ್ಲಿ ಶೆಡ್ ನಿರ್ಮಿಸಿಲ್ಲ. ಹೊಸ ಜಿಲ್ಲಾಧಿಕಾರಿ ನೇಮಕಗೊಂಡಾಗಲೆಲ್ಲ ಈ ಕುರಿತಾಗಿ ಮೀನುಗಾರರು ಸಲ್ಲಿಸಿದ ಮನವಿಗೆ ಸ್ಪಂದನೆಯೇ ಸಿಕ್ಕಿಲ್ಲ’ ಎಂದರು.
ಸದ್ಬಳಕೆ ಆಗಿದ್ದೇ ಕಡಿಮೆ! ‘
ಮೀನುಗಾರಿಕೆ ಪರಿಕರ ಇರಿಸಲು ಲಕ್ಷಾಂತರ ಮೊತ್ತ ವ್ಯಯಿಸಿ ಕಡಲತೀರದಲ್ಲಿ ನಿರ್ಮಿಸಿದ್ದ ಶೆಡ್ ಮೀನುಗಾರಿಕೆ ಪರಿಕರ ಇರಿಸುವುದಕ್ಕಿಂತ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿತ್ತು. ಕೆಲ ವರ್ಷಗಳ ಹಿಂದೆ ಅಲ್ಲಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾಗ ಮೀನುಗಾರಿಕೆ ಪರಿಕರಗಳಿಗಿಂತ ಮದ್ಯದ ಖಾಲಿ ಬಾಟಲಿಗಳು ಸಿಕ್ಕಿದ್ದವು. ಆದರೆ ತಮಗೆ ಸಂಬಂಧಿಸಿದ್ದಲ್ಲ ಎಂದು ಮೀನುಗಾರರು ಹೇಳಿದ್ದರು. ಈಚಿನ ವರ್ಷಗಳಲ್ಲಿ ಕೆಲವರು ಮಾತ್ರ ಶೆಡ್‌ನ್ನು ಪರಿಕರ ಇರಿಸಲು ಬಳಸಿಕೊಂಡಿದ್ದರು. ಯಾವ ಇಲಾಖೆ ನಿರ್ವಹಣೆ ಕೈಗೊಳ್ಳಬೇಕು ಎಂಬ ಸ್ಪಷ್ಟತೆ ಇಲ್ಲದೆ ಶೆಡ್ ಮೂಲೆಗುಂಪಾಯಿತು’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.