ADVERTISEMENT

ಕಾರವಾರ: ಕಡಲ ಮಕ್ಕಳಿಗೆ ‘ಮತ್ಸ್ಯ ಕ್ಷಾಮ’ದ ಚಿಂತೆ

ಮೀನುಗಾರಿಕೆ ಬಂದರಿನಲ್ಲಿ ಚಟುವಟಿಕೆ ಸ್ತಬ್ಧ: ನೀರಿಗಿಳಿಯದ ಪರ್ಸಿನ್ ಬೋಟ್

ಗಣಪತಿ ಹೆಗಡೆ
Published 29 ನವೆಂಬರ್ 2023, 4:33 IST
Last Updated 29 ನವೆಂಬರ್ 2023, 4:33 IST
ಮೀನುಗಾರಿಕೆ ಚಟುವಟಿಕೆ ಇಲ್ಲದೆ ಬಿಕೋ ಎನ್ನುತ್ತಿರುವ ಕಾರವಾರದ ಬೈತಕೋಲದಲ್ಲಿರುವ ಮೀನುಗಾರಿಕೆ ಬಂದರು ಪ್ರದೇಶ.
ಮೀನುಗಾರಿಕೆ ಚಟುವಟಿಕೆ ಇಲ್ಲದೆ ಬಿಕೋ ಎನ್ನುತ್ತಿರುವ ಕಾರವಾರದ ಬೈತಕೋಲದಲ್ಲಿರುವ ಮೀನುಗಾರಿಕೆ ಬಂದರು ಪ್ರದೇಶ.   

ಕಾರವಾರ: ನಿರಂತರ ಮೀನುಗಾರಿಕೆ ಚಟುವಟಿಕೆಯಲ್ಲಿ ಇರುತ್ತಿದ್ದ ಕರಾವಳಿ ಭಾಗದ ಬಹುತೇಕ ಮೀನುಗಾರಿಕೆ ಬಂದರುಗಳಲ್ಲಿ ಈಗ ಮೌನ ಆವರಿಸಿದೆ. ಮೂರು ತಿಂಗಳು ಮೀನು ಬೇಟೆಯಾಡಿದ್ದ ಬೋಟುಗಳು ಈಗ ಮೀನು ಕೊರತೆಯ ಕಾರಣಕ್ಕೆ ದಡದಲ್ಲೇ ಲಂಗರು ಹಾಕಿವೆ.

ಆಳಸಮುದ್ರದ ಮೀನುಗಾರಿಕೆ ಮಾಡತ್ತಿದ್ದ ಪರ್ಸಿನ್ ಬೋಟ್‍ಗಳು ಕೂಡ ಬಂದರು ಬಿಟ್ಟು ಹೊರಬಂದಿಲ್ಲ.  ದುಡಿಮೆಗೆಂದೇ ಹೊರರಾಜ್ಯದಿಂದ ಬರುತ್ತಿದ್ದ ಕಾರ್ಮಿಕರ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ ಮೀನುಗಾರಿಕೆ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಹಲವು ದಿನಗಳಿಂದ ಲಂಗರು ಹಾಕಿರುವ ಸಾಲು ಬೋಟುಗಳು ಕಾಣುತ್ತವೆ.

ಜಿಲ್ಲೆಯಲ್ಲಿ 1,113 ಪರ್ಸಿನ್, 4,027 ಟ್ರಾಲರ್ ಬೋಟುಗಳಿವೆ. ಬಹುತೇಕ ಬಂದರುಗಳಲ್ಲಿ ಪರ್ಸಿನ್, ಟ್ರಾಲರ್ ಬೋಟುಗಳು ದಡದಲ್ಲೇ ಉಳಿದಿದ್ದು, ಮೀನು ಬೇಟೆಗೆ ಉತ್ಸಾಹ ತೋರಿಸುತ್ತಿಲ್ಲ. ಮೀನುಗಾರಿಕೆ ಆಧರಿಸಿ ಜೀವನ ಸಾಗಿಸುತ್ತಿರುವ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರವಾಗಿವೆ.

ADVERTISEMENT

‘ಆಳ ಸಮುದ್ರದಲ್ಲಿ ಮೀನುಗಳು ನಿರೀಕ್ಷಿತ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ದಡಕ್ಕೆ ಸಮೀಪದಲ್ಲಿ ಮೀನು ಸಿಗುತ್ತಾವಾದರೂ ಲೋಳೆ ಮೀನುಗಳ (ಜೆಲ್ಲಿ ಫಿಶ್) ಸಂತತಿ ಹೆಚ್ಚಿರುವುದರಿಂದ ಬಲೆ ಬೀಸುವುದು ಕಷ್ಟವಾಗಿದೆ. ಇದರಿಂದ ಮೀನು ಸಿಗದೆ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸ್ಥಿತಿ ಇದೇ ವರ್ಷ ಎದುರಾಗಿದೆ’ ಎಂದು ಟ್ರಾಲರ್ ಬೋಟ್ ಮಾಲೀಕ ಶ್ರೀಧರ ಹರಿಕಂತ್ರ ತಿಳಿಸಿದರು.

‘ಒಂದು ತಿಂಗಳಿನಿಂದಲೂ ಮೀನು ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಬೋಟುಗಳನ್ನು ನೀರಿಗಿಳಿಸಿದರೆ ಕನಿಷ್ಠ ₹15 ಸಾವಿರ ಮೌಲ್ಯದ ಮೀನುಗಳಾದರೂ ಲಭಿಸಬೇಕು. ಆಗ ಮಾತ್ರ ಡೀಸೆಲ್ ವೆಚ್ಚ, ಕಾರ್ಮಿಕರ ವೇತನದ ವೆಚ್ಚ ನಿಭಾಯಿಸಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ಸಾವಿರ ಮೌಲ್ಯದಷ್ಟು ಮೀನು ಕೂಡ ಸಿಗುತ್ತಿಲ್ಲ’ ಎಂದರು.

‘ಆಗಸ್ಟ್ ತಿಂಗಳಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಚಟುವಟಿಕೆ ಆರಂಭಗೊಂಡಿದ್ದರೂ ಪರ್ಸಿನ್ ಬೋಟುಗಳು ಆಳ ಸಮುದ್ರಕ್ಕೆ ತೆರಳಿದ್ದು ಕಡಿಮೆ. ಬೋಟುಗಳಲ್ಲಿ ದುಡಿಯುತ್ತಿದ್ದ ಹೊರರಾಜ್ಯದ ಕಾರ್ಮಿಕರು ಕೆಲಸಕ್ಕೆ ಬಂದಿಲ್ಲ. ಕಾರ್ಮಿಕರನ್ನು ಕರೆತರುವ ತಂಡದ ಮುಖ್ಯಸ್ಥರು ಲಕ್ಷಾಂತರ ಮುಂಗಡ ಪಡೆದು ನಾಪತ್ತೆಯಾಗಿದ್ದಾರೆ. ಹಣ ಕಳೆದುಕೊಂಡಿದ್ದಲ್ಲದೆ, ಕಾರ್ಮಿಕರು ಸಿಗದೆ ಬೋಟ್ ನಿರ್ವಹಣೆ ಕಷ್ಟವಾಗಿದೆ’ ಎಂದು ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ರಾಜು ತಾಂಡೇಲ್ ಅಳಲು ತೋಡಿಕೊಂಡರು.

ಮಳೆ ಕೊರತೆ ಜೊತೆಗೆ ಹವಾಮಾನ ವೈಪರೀತ್ಯದ ಕಾರಣ ಮೀನು ಇಳುವರಿ ಕಡಿಮೆಯಾಗಿರುವ ಸಾಧ್ಯತೆ ಇದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಸ್ಯೆಯಾಗಿ ಜನವರಿಯಲ್ಲಿ ಎಲ್ಲವೂ ಸರಿಯಾಗಿತ್ತು..
ಬಬಿನ್ ಬೋಪಣ್ಣ, ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ

‘ಅವೈಜ್ಞಾನಿಕ ಮೀನುಗಾರಿಕೆಯಿಂದ ಕ್ಷಾಮ’

‘ಮೀನು ಮರಿ ಮೊಟ್ಟೆಗಳನ್ನು ಹಾಳುಗೆಡವುವ ಬುಲ್ ಟ್ರಾಲ್ ಬೆಳಕಿನ ಮೀನುಗಾರಿಕೆ ಚಟುವಟಿಕೆ ಅವ್ಯಾಹತವಾಗಿ ನಡೆದಿರುವುದು ಈಗ ಮೀನು ಕೊರತೆ ಎದುರಾಗಲು ಮುಖ್ಯ ಕಾರಣ. ಜಿಲ್ಲೆಯಲ್ಲಿ ಅಂತಹ ಚಟುವಟಿಕೆ ಸದ್ಯಕ್ಕೆ ಅಷ್ಟಾಗಿ ನಡೆದಿರುವುದು ಮೇಲ್ನೋಟಕ್ಕೆ ಕಾಣದಿದ್ದರೂ ನೆರೆಯ ಗೋವಾ ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಕವಾಗಿದೆ’ ಎಂದು ಕಡಲಜೀವಶಾಸ್ತ್ರ ಪ್ರಾಧ್ಯಾಪಕ ಶಿವಕುಮಾರ ಹರಗಿ ತಿಳಿಸಿದರು. ‘ಸಣ್ಣ ಕಣ್ಣಿನ ಬಲೆ ಬಳಸಿ ಚಿಕ್ಕ ಮೀನುಗಳನ್ನು ಬೆಳೆಯಲು ಬಿಡದೆ ಹಿಡಿಯುತ್ತಿರುವ ಕಾರಣದ ಸಮುದ್ರದಲ್ಲಿ ಮತ್ಸ್ಯ ಸಂತತಿ ನಿರೀಕ್ಷೆಗೂ ಮೀರಿ ಕ್ಷೀಣಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.