ADVERTISEMENT

ಭಟ್ಕಳ ಬಂದರಿನಲ್ಲಿ ಹೂಳು: ದೋಣಿ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 15:35 IST
Last Updated 17 ಮೇ 2022, 15:35 IST
ಭಟ್ಕಳ ಬಂದರಿನಲ್ಲಿ ಮಂಗಳವಾರ ದುರ್ಗಾಂಬಿಕಾ ದೋಣಿ ಮುಳುಗಡೆಯಾಯಿತು
ಭಟ್ಕಳ ಬಂದರಿನಲ್ಲಿ ಮಂಗಳವಾರ ದುರ್ಗಾಂಬಿಕಾ ದೋಣಿ ಮುಳುಗಡೆಯಾಯಿತು   

ಭಟ್ಕಳ: ಅತಿದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಸುವ ಭಟ್ಕಳ ಬಂದರಿನಲ್ಲಿ ಮಂಗಳವಾರ ಬೆಳಿಗ್ಗೆ ಲಂಗರು ಹಾಕಿದ್ದ ದೋಣಿ ಸಂಪೂರ್ಣ ಮುಳುಗಡೆಯಾಗಿದ್ದು, ಮೂರು ದೋಣಿಗಳಿಗೆ ಭಾಗಶಃ ಹಾನಿಯಾಗಿದೆ.

ನಾಗಪ್ಪ ತಿಮ್ಮಪ್ಪ ಖಾರ್ವಿ ಅವರ ದುರ್ಗಾಂಬಿಕಾ ದೋಣಿ ಮುಳುಗಡೆಯಾಗಿದೆ. ಪ್ರೇಮಾ ರತ್ನಾ ಖಾರ್ವಿ ಅವರ ಶ್ರೀ ನಿತ್ಯಾನಂದ, ರಾಮಚಂದ್ರ ಖಾವಿ ಅವರ ಜೈನ ಜಟಗಾ ಹಾಗೂ ಮಹೇಶ ಖಾರ್ವಿ ಅವರ ಗಗನ ದೋಣಿಗಳಿಗೆ ಭಾಗಶಃ ಹಾನಿಯಾಗಿದೆ.

ಇಲ್ಲಿ 150ಕ್ಕೂ ಹೆಚ್ಚು ಚಿಕ್ಕ ಹಾಗೂ ದೊಡ್ಡ ದೋಣಿಗಳು ನಿಲುಗಡೆಯಾಗುತ್ತದೆ. ಸರಿಯಾಗಿ ಹೂಳೆತ್ತದ ಕಾರಣ ನೀರಿನ ಏರಿಳಿತ
ವಾದಾಗ ಲಂಗರು ಹಾಕಿರುವ ದೋಣಿಗಳು ಒಂದಕ್ಕೊಂದು ಡಿಕ್ಕಿಯಾಗಿ ಹಾನಿಯಾಗುತ್ತದೆ. ಅಮವಾಸ್ಯೆ ಹಾಗೂ ಹುಣ್ಣಿಮೆ ಸಂದರ್ಭದಲ್ಲಿ ಅಲೆಗಳ ರಭಸ ಹೆಚ್ಚಿ ಅಪಘಡಗಳು ಹೆಚ್ಚಾಗಿ ಸಂಭವಿಸುತ್ತದೆ. ಹೂಳೆತ್ತುವಂತೆ ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಮೀನುಗಾರರ ಮುಖಂಡ ನಾರಾಯಣ ಖಾರ್ವಿ ತಿಳಿಸಿದರು.

ADVERTISEMENT

ಹೂಳೆತ್ತಲು ಬಜೆಟ್‌ನಲ್ಲಿ ಅನುದಾನ ಘೋಷಿಸುವಂತೆ ಭಟ್ಕಳ ಮೀನುಗಾರರು ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು. ಬೇಸಿಗೆ ಕಳೆದು ಮಳೆಗಾಲ ಆರಂಭವಾದರೂ ಅನುದಾನ ಮಾತ್ರ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.