ADVERTISEMENT

ಕಾರವಾರ: ಪ್ರವಾಸಿಗರ ಬೇಕಾಬಿಟ್ಟಿ ವರ್ತನೆಗೆ ಅಂಕುಶ

ಯಲ್ಲಾಪುರ ತಾಲ್ಲೂಕಿನ ಕಾನೂರು ಜಲಪಾತ ವೀಕ್ಷಣೆಗೆ ನಿಯಮಗಳ ಪಾಲನೆ ಅಗತ್ಯ

ಸದಾಶಿವ ಎಂ.ಎಸ್‌.
Published 23 ನವೆಂಬರ್ 2020, 19:30 IST
Last Updated 23 ನವೆಂಬರ್ 2020, 19:30 IST
ಯಲ್ಲಾಪುರ ತಾಲ್ಲೂಕಿನ ಕಾನೂರು ಜಲಪಾತವು ಆಳಕ್ಕೆ ಧುಮ್ಮಿಕ್ಕುವುದು
ಯಲ್ಲಾಪುರ ತಾಲ್ಲೂಕಿನ ಕಾನೂರು ಜಲಪಾತವು ಆಳಕ್ಕೆ ಧುಮ್ಮಿಕ್ಕುವುದು   

ಕಾರವಾರ: ತಾಲ್ಲೂಕಿನ ಗಡಿಯ ಸಮೀಪದಲ್ಲಿರುವ, ಯಲ್ಲಾಪುರ ತಾಲ್ಲೂಕಿನ ಕಾನೂರು (ದೇವಕಾರು) ಜಲಪಾತದಲ್ಲಿ ಪ್ರವಾಸಿಗರು ಇನ್ನುಮುಂದೆ ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಇಲ್ಲಿ ಆಗುತ್ತಿರುವ ಅಪಾಯಗಳನ್ನು ಮನಗಂಡು ಅರಣ್ಯ ಇಲಾಖೆಯು ಕೆಲವು ನಿರ್ಬಂಧಗಳನ್ನು ವಿಧಿಸಿದ್ದು, ಪಾಲಿಸದವರಿಗೆ ಕಾನೂನು ಕ್ರಮದ ಬಿಸಿ ಮುಟ್ಟಲಿದೆ.

ಕೊಡಸಳ್ಳಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಈ ಜಲಧಾರೆಯು ವಾರಾಂತ್ಯದ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಪಶ್ಚಿಮ ಘಟ್ಟದ ಅಪರೂಪದ ಅರಣ್ಯದಲ್ಲಿ ಸುಮಾರು 300 ಅಡಿ ಎತ್ತರದಿಂದ ನೀರು ಹಾಲ್ನೊರೆಯಂತೆ ಧುಮ್ಮಿಕುತ್ತದೆ. ಜಲಪಾತದ ಬುಡಕ್ಕೆ ತೆರಳಿ ವೀಕ್ಷಿಸಲು ಅವಕಾಶ ಇಲ್ಲದ ಕಾರಣ, ಪ್ರವಾಸಿಗರು ಮೇಲಿನಿಂದಲೇ ಕಣ್ತುಂಬಿಕೊಳ್ಳುತ್ತಾರೆ.

ರುದ್ರರಮಣೀಯ ದೃಶ್ಯವನ್ನು ನೋಡುವ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಫೋಟೊ, ಸೆಲ್ಫಿಗಳನ್ನು ತೆಗೆದುಕೊಳ್ಳುವ ಭರದಲ್ಲಿ ಮೈಮರೆತು ಅಪಾಯ ತಂದುಕೊಳ್ಳುವ ಸಾಧ್ಯತೆಯಿದೆ. ಈ ವರ್ಷ ಮಳೆಗಾಲದಲ್ಲಿ ಯುವಕನೊಬ್ಬ ಇಲ್ಲಿಂದ ಬಿದ್ದು ಪ್ರಾಣಾಪಾಯವಾಗಿತ್ತು. ಕೆಲವು ವರ್ಷಗಳ ಹಿಂದೆಯೂ ಇಲ್ಲಿ ಇಂತಹ ಅಹಿತಕರ ಘಟನೆಯಾಗಿತ್ತು.

ADVERTISEMENT

ಈ ಹಿಂದೆ ಇದ್ದ ಮುಕ್ತ ಪ್ರವೇಶಾವಕಾಶವನ್ನು ಹಲವು ಪ್ರವಾಸಿಗರು ದುರ್ಬಳಕೆ ಮಾಡಿಕೊಂಡಿದ್ದರು. ಕಾಡಿನ ನಡುವೆ ತರಗೆಲೆ, ಒಣಕಟ್ಟಿಗೆಗೆ ಬೆಂಕಿ ಹಾಕುವುದು, ಮದ್ಯಸೇವನೆ, ಆಹಾರ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಡಿನಲ್ಲೇ ಎಸೆದು ಮಾಲಿನ್ಯ ಮಾಡುತ್ತಿದ್ದರು. ಇದರಿಂದ ಸುತ್ತಮುತ್ತಲಿಗೆ ಗ್ರಾಮಸ್ಥರಿಗೂ ಕಿರಿಕಿರಿಯಾಗುತ್ತಿತ್ತು. ಇದನ್ನು ತಡೆಯಲು ಅರಣ್ಯ ಇಲಾಖೆಯ ಕಾನೂರು– ವಾಗಳ್ಳಿ ಗ್ರಾಮ ಅರಣ್ಯ ಸಮಿತಿಯ ಮೂಲಕ ನಿಯಮಗಳನ್ನು ಜಾರಿ ಮಾಡಿದೆ.

ವೀಕ್ಷಣೆಗೆ ಸಮಯ ನಿಗದಿ:

‘ಪ್ರತಿನಿತ್ಯ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆಜಲಪಾತ ವೀಕ್ಷಿಸಬಹುದು. ದಾರಿಯಲ್ಲಿ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ. ಪ್ರವಾಸಿಗರನ್ನು ತಪಾಸಣೆ ಮಾಡಿ, ಅವರ ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಎಸೆಯುವುದು, ಮದ್ಯ ಸೇವನೆ, ಕಾಡಿನ ಮಧ್ಯೆ ಬೆಂಕಿ ಹಾಕುವುದನ್ನು ನಿಷೇಧಿಸಲಾಗಿದೆ’ ಎನ್ನುತ್ತಾರೆ ಇಡಗುಂದಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಪ್ರಸಾದ ಪೆಡ್ನೇಕರ್.

‘ಕಾಡು ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವ ರೀತಿಯಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಜಲಪಾತದ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆ. ಪ್ರವಾಸಿಗರಿಗೆ ಕಾಡಿನ ಮಧ್ಯೆ ಅಪರೂಪದ ಸಸ್ಯ ಸಂಕುಲಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗಿದೆ. ಜನರ ಓಡಾಟದಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ತೊಂದರೆ ಆಗದಂತೆಯೂ ಎಚ್ಚರಿಕೆ ವಹಿಸಲಾಗಿದೆ’ ಎಂದು ಅವರು ಹೇಳುತ್ತಾರೆ.

ಹೋಗುವುದು ಹೇಗೆ?:

ಕಾನೂರು ಜಲಪಾತವನ್ನು ತಲುಪಲು ಯಲ್ಲಾಪುರದಿಂದ ಕಾರವಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಬತ್ತು ಕಿ.ಮೀ ಸಾಗಬೇಕು. ಇಡಗುಂದಿ (ಚಿನ್ನಾಪುರ ) ಎಂಬಲ್ಲಿ ಬಲಕ್ಕೆ ತಿರುಗಿ ಕೈಗಾ– ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಬಾಸಲ ಊರಿನ ವಾಗಳ್ಳಿ ಕ್ರಾಸ್ ಎಂಬಲ್ಲಿ ತಿರುಗಬೇಕು. ಅಲ್ಲಿಂದ ಕಾನೂರು ಜಲಪಾತಕ್ಕೆ 30 ಕಿ.ಮೀ ಕ್ರಮಿಸಬೇಕು. ಕಾರವಾರದಿಂದ ಮಲ್ಲಾಪುರ ಮಾರ್ಗವಾಗಿ ಯಲ್ಲಾಪುರಕ್ಕೆ ತಲುಪುವ ದಾರಿಯಲ್ಲಿಯೂ ಇಲ್ಲಿಗೆ ತಲುಪಬಹುದು.

* ಕಾನೂರು ಜಲಪಾತದಲ್ಲಿ ಸುರಕ್ಷತೆಗೆ ಅರಣ್ಯ ಇಲಾಖೆಯ ಕ್ರಮಗಳು ಸ್ವಾಗತಾರ್ಹ. ನೀರಿನಲ್ಲಿ ಸಂಭ್ರಮದ ನಡುವೆ ಮೈಮರೆಯದೇ ಎಚ್ಚರಿಕೆಯಿಂದ ಇರುವುದು ಅಗತ್ಯ.

– ಪವನ್ ಕುಮಾರ್, ಧಾರವಾಡದ ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.