ADVERTISEMENT

ಅರ್ಜಿ ಪುನರ್ ಪರಿಶೀಲನೆ ವಿಧಾನಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಮೇ 2022, 13:16 IST
Last Updated 16 ಮೇ 2022, 13:16 IST
ಅರಣ್ಯ ಭೂಮಿ ಹಕ್ಕು ಮಂಜೂರು ಪ್ರಕ್ರಿಯೆಯಲ್ಲಿ ಅರ್ಜಿ ಪುನರ್ ಪರಿಶೀಲನೆ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು
ಅರಣ್ಯ ಭೂಮಿ ಹಕ್ಕು ಮಂಜೂರು ಪ್ರಕ್ರಿಯೆಯಲ್ಲಿ ಅರ್ಜಿ ಪುನರ್ ಪರಿಶೀಲನೆ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು   

ಕಾರವಾರ: ಅರಣ್ಯ ಭೂಮಿ ಹಕ್ಕು ಮಂಜೂರು ಪ್ರಕ್ರಿಯೆಯಲ್ಲಿ ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿ ಮತ್ತು ಮೂರು ತಲೆಮಾರುಗಳ ದಾಖಲೆಗಳನ್ನು ನೀಡುವಂತೆ ಷರತ್ತು ವಿಧಿಸುವುದಕ್ಕೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಕ್ಷೇಪ ವ್ಯಕ್ತಪಡಿಸಿದೆ.

ವೇದಿಕೆಯ ಅಧ್ಯಕ್ಷ ರವೀಂದ್ರ ನಾಯಕ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಇದೊಂದು ತಕ್ಷಣ ಕಾನೂನು ಬಾಹಿರ ಕ್ರಮವಾಗಿದೆ. ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿದೆ. ವಾಸಮಾಡುವ ಜಮೀನನ್ನು ಕಬ್ಜಾ ಹೊಂದಿರುವ ವೈಯಕ್ತಿಕ ದಾಖಲೆ ಹಾಜರುಪಡಿಸಲು ಕೇಳುವುದು ಕಾನೂನಿಗೆ ವಿರುದ್ಧವಾಗಿದೆ. ಉಪವಿಭಾಗ ಸಮಿತಿ ಅರಣ್ಯ ಅತಿಕ್ರಮಣಕಾರರಿಗೆ ವಿಚಾರಣೆಯ ನೋಟಿಸ್ ನೀಡುತ್ತಿರುವುದು ಸರಿಯಲ್ಲ’ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ADVERTISEMENT

‘ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸಬಾರದು ಎಂದು ಕಾನೂನಿನಲ್ಲಿ ಉಲ್ಲೇಖವಿದೆ. ಆದರೂ ದಾಖಲೆಗಳಿಗೆ ಒತ್ತಾಯಿಸಲಾಗುತ್ತಿದೆ. ಅಲ್ಲದೇ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು, ಮೂರು ತಲೆಮಾರುಗಳ ಜನವಸತಿ ಪ್ರದೇಶ ಎಂದು ಪುರಾವೆ ನೀಡಿದರೆ ಸಾಕು. ಕೇಂದ್ರ ಬುಡಕಟ್ಟು ಸಚಿವಾಲಯವೇ ಈ ಆದೇಶ ನೀಡಿದ್ದು, ಜಿಲ್ಲಾಡಳಿತ ನಿರ್ಲಕ್ಷಿಸುತ್ತಿದೆ’ ಎಂದು ಆರೋಪಿಸಿದೆ.

‘ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ವಿಲೇವಾರಿ ಮಾಡುವ ಕ್ರಮಕ್ಕೆ ಸಲ್ಲಿಸಿರುವ ಆಕ್ಷೇಪವನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದು ತಿಳಿಸಿದೆ.

ವೇದಿಕೆಯ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಜಿಲ್ಲಾ ಘಟಕದ ಸಂಚಾಲಕ ರಾಜೇಶ ಮಿತ್ರ ನಾಯ್ಕ, ಪ್ರಮುಖರಾದ ಶಾಂತ ತಿಮ್ಮಣ್ಣ ಕುಣಬಿ, ಇಜಾಜ್ ಎ ಶೇಖ್, ರೋಹಿದಾಸ ವೈಂಗಣಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.