ಶಿರಸಿ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2025ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಅರಣ್ಯ ಹಕ್ಕು ಸಮಿತಿಯಡಿ ನಡೆದ ಪುನರ್ ಪರಿಶೀಲನೆ ಪ್ರಕ್ರಿಯೆಯಲ್ಲಿ 7,184 ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸಿರುವುದು ಖೇದರಕ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಲ್ಪಟ್ಟ ಅರ್ಜಿಗಳ ಕುರಿತು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಪ್ರಮುಖರೊಂದಿಗೆ ಸೋಮವಾರ ಜರುಗಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸುಪ್ರೀಂ ಕೊರ್ಟ್ ನಿರ್ದೇಶನ ಮತ್ತು ಮಾರ್ಗದರ್ಶನ ಪಾಲನೆ ಮಾಡದೇ, ಗ್ರಾಮ ಸಭೆಯ ಮಾನದಂಡ ಮತ್ತು ನಿಯಮಾವಳಿ ತಿರಸ್ಕರಿಸಿ, ಗ್ರಾಮ ಸಭೆಯಲ್ಲಿ ತೀರ್ಮಾನಿಸದೆ, ಸಭೆಯಲ್ಲಿ ಹಾಜರಿಯ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಅರ್ಜಿಗಳನ್ನು ತಿರಸ್ಕರಿಸ್ಪಟ್ಟಿರುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬುಡಕಟ್ಟು ಜನಾಂಗ 4,335 ಹಾಗೂ 80,730 ಪಾರಂಪರಿಕ ಅರಣ್ಯವಾಸಿಗಳು ಮಂಜೂರಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ಬುಡಕಟ್ಟು ಜನಾಂಗಕ್ಕೆ 1,356 ಹಾಗೂ ಪಾರಂಪರಿಕ ಅರಣ್ಯವಾಸಿಗಳಿಗೆ 385 ಸಾಗುವಳಿ ಹಕ್ಕು ನೀಡಲಾಗಿತ್ತು. ಈ ಹಂತದಲ್ಲಿ ಜಿಲ್ಲೆಯಾದ್ಯಂತ 11,718 ಅರಣ್ಯವಾಸಿಗಳ ಅರ್ಜಿಗಳನ್ನು ತಿರಸ್ಕರಿಸಲ್ಪಟ್ಟ ಹಕ್ಕು ಸಮಿತಿಗಳಿಂದಲೇ ಪುನರ್ ಪರಿಶೀಲನಾ ಕಾರ್ಯ ಜರುಗಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆ ಪ್ರಕಾರ ನಡೆದ ಪುನರ್ ಪರಿಶೀಲನೆ ವೇಳೆ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಲ್ಪಟ್ಟ ಒಟ್ಟು 11,718 ಅರ್ಜಿಗಳಲ್ಲಿ 7,184 ಅರ್ಜಿಗಳನ್ನು ಮತ್ತೆ ತಿರಸ್ಕರಿಸಲ್ಪಟ್ಟ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಘಟಕದ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ, ಎಂ.ಆರ್. ನಾಯ್ಕ, ರಾಜೀವ ಗೌಡ ಕತಗಾಲ್, ಕೆರಿಯಾ ಬೊಮ್ಮ ಗೌಡ, ಯಶೋಧಾ ನೌಟೂರು, ರಾಮ ತುಕಾರಾಮ ಗಾವಡೆ, ಬಸ್ತ್ಯಾಂವ್ ಅಂತೋನ್ ಡಿಸೋಜಾ ಇದ್ದರು.
ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸುವ ಮೂಲಕ ಅರ್ಹ ಅರ್ಜಿಗಳನ್ನು ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕರಿಸಿರುವುದು ಖೇದಕರ ಸಂಗತಿರವೀಂದ್ರ ನಾಯ್ಕ, ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.