ADVERTISEMENT

ಉತ್ತರಕನ್ನಡ: ಕೋವಿಡ್ ನೆಪದಲ್ಲೂ ಮೋಸದ ಜಾಲ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 15:26 IST
Last Updated 1 ಜುಲೈ 2020, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಲಾಟರಿ, ಅದೃಷ್ಟಶಾಲಿ ಬಹುಮಾನ, ಕಾರು ಖರೀದಿಸಿದ್ದಕ್ಕೆಕೊಡುಗೆಎಂದೆಲ್ಲ ಅಮಾಯಕರನ್ನು ವಂಚಿಸುತ್ತಿದ್ದ ಸೈಬರ್ ವಂಚಕರು, ಈಗ ಕೋವಿಡ್ 19 ಪೀಡಿತರಿಗೇ ಮೋಸ ಮಾಡಲು ಯತ್ನಿಸುತ್ತಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯು.ಎಚ್.ಒ) ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಗೆ ನೀಡುವ ಪರಿಹಾರ ನಿಧಿಗೆ ನೀವು ಆಯ್ಕೆಯಾಗಿದ್ದೀರಿ’ ಎಂದು ಸೋಂಕಿತರ ಮೊಬೈಲ್‌ ಫೋನ್‌ಗೆ ಕರೆಗಳು, ಎಸ್ಸೆಮ್ಮೆಸ್‌ಗಳು, ಇ–ಮೇಲ್‌ ವಿಳಾಸಕ್ಕೆ ಸಂದೇಶಗಳು ಬರುತ್ತಿವೆ.ಡಬ್ಲ್ಯು.ಎಚ್.ಒ.ದ ಹಕ್ಕು ಕೋರಿಕೆ ವಿಭಾಗದ ವ್ಯವಸ್ಥಾಪಕ ಬ್ಯಾರಿಸ್ಟರ್ ಜೆಫ್ ಹಂಟರ್ ಎಂಬ ವ್ಯಕ್ತಿಯ ಹೆಸರು ಆ ಸಂದೇಶದಲ್ಲಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರಿಗೆ ಕಾರವಾರದ ಅಚ್ಯುತ ಕುಮಾರ್ ಎಂಬುವವರು ಬುಧವಾರ ದೂರು ನೀಡಿದ್ದಾರೆ.

ADVERTISEMENT

‘ಕೋವಿಡ್ ಪೀಡಿತರ ಹೆಸರು ಸೇರಿದಂತೆ ಅವರ ಮಾಹಿತಿಗಳನ್ನುಬಹಿರಂಗ ಪಡಿಸುವುದು ಕಾನೂನು ಬಾಹಿರವಾಗಿದೆ. ಆದರೆ, ಅವರ ಮೊಬೈಲ್ ಸಂಖ್ಯೆ, ಇ–ಮೇಲ್ ಐ.ಡಿ ಹಾಗೂ ವಿಳಾಸವು ವಂಚಕರಿಗೆ ಸಿಕ್ಕಿದೆ. ಗುಪ್ತಚರಅಧಿಕಾರಿ ಎಂದು ಅನೇಕರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿದ ಮಾಹಿತಿಯೂ ಇದೆ. ಸರ್ಕಾರಿ ಕಚೇರಿಗಳ ಸಿಬ್ಬಂದಿಯೇ ಸೋಂಕಿತರ ದಾಖಲೆಗಳನ್ನು ಮಾರಾಟ ಮಾಡಿರುವ ಅನುಮಾನವಿದೆ’ ಎಂದು ಅವರುದೂರಿದ್ದಾರೆ.

‘ಕೋವಿಡ್ ಪರಿಹಾರ ನಿಧಿ ನೀಡುವುದಾಗಿ ಸೈಬರ್ ವಂಚಕರು ಕರೆ ಮಾಡಿ, ಕೆಲವು ಸೋಂಕಿತರ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಆ ಹಣವನ್ನು ಪಡೆದುಕೊಳ್ಳಲು ತೆರಿಗೆ ಪಾವತಿಸುವಂತೆ ತಿಳಿಸಿ, ಹಣ ಪಡೆದು ವಂಚಿಸಲು ಯತ್ನಿಸಿದ್ದಾರೆ. ಆದ್ದರಿಂದ,ಈಸಂಗತಿಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಸೋಂಕಿತರ ಮಾಹಿತಿಯನ್ನು ಸೋರಿಕೆ ಮಾಡಿದವರನ್ನುಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಕೋವಿಡ್ 19 ಸೋಂಕಿತರಿಗೆ ಸೈಬರ್ ವಂಚಕರು ಮೋಸ ಮಾಡಲು ಯತ್ನಿಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.

– ಶಿವಪ್ರಕಾಶ ದೇವರಾಜು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.