ADVERTISEMENT

ಉರುಳಿದ ಗ್ಯಾಸ್ ಟ್ಯಾಂಕರ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 3:11 IST
Last Updated 3 ಮಾರ್ಚ್ 2021, 3:11 IST
ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಉರುಳಿ ಬಿದ್ದ ತುಂಬಿದ ಗ್ಯಾಸ್ ಟ್ಯಾಂಕರ್
ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಉರುಳಿ ಬಿದ್ದ ತುಂಬಿದ ಗ್ಯಾಸ್ ಟ್ಯಾಂಕರ್   

ಯಲ್ಲಾಪುರ: ತಾಲ್ಲೂಕಿನ ಅರಬೈಲ್ ಘಟ್ಟದ ತಾಳಿಕುಂಬ್ರಿಯ ಬಳಿ ರಾ.ಹೆ.63ರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ತುಂಬಿದ ಗ್ಯಾಸ್ ಟ್ಯಾಂಕರ್ ಮಂಗಳವಾರ ರಸ್ತೆ ಪಕ್ಕದಲ್ಲಿ ತಲೆ ಕೆಳಗಾಗಿ ಉರುಳಿ ಬಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಗ್ಯಾಸ್ ಟ್ಯಾಂಕರ್ ಖಾಸಗಿ ಕಂಪನಿಯದ್ದಾಗಿದ್ದು, ಚೆನೈನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ತಮಿಳುನಾಡಿದ ಕಲ್ಲಪಳಿಯಂ ನಿವಾಸಿ ಪೊನ್ನಸ್ವಾಮಿ, ಸುಬ್ರಹ್ಮಣ್ಯಂ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ಯಾಸ್ ವಾಹನಗಳಿಗೆ ಅಪಘಾತವಾದಾಗ ಭೇಟಿ ನೀಡುವ ಅಂಕೋಲಾದ ಕ್ಷಿಪ್ರ ಕಾರ್ಯಾಚರಣೆ ಪಡೆ ಭೇಟಿ ನೀಡಿ, ಗ್ಯಾಸ್ ಸೋರಿಕೆ ಇಲ್ಲವೆಂದು ಖಚಿತಪಡಿಸಿತು.

ಮಂಗಳೂರಿನಿಂದ ಗ್ಯಾಸ್ ಟ್ಯಾಂಕರ್ ಮೇಲಕ್ಕೆತ್ತುವ ಕ್ರೇನ್ ಗಳು ಸ್ಥಳಕ್ಕಾಗಮಿಸಿದ್ದು, ರಾತ್ರಿ ವೇಳೆ ಟ್ಯಾಂಕರ್ ಅನ್ನು ನಿಲ್ಲಿಸಿ ಅದರಲ್ಲಿನ ಗ್ಯಾಸ್ ಅನ್ನು ಈಗಾಗಲೇ ಆಗಮಿಸಿರುವ ಮತ್ತೊಂದು ಖಾಲಿ ಗ್ಯಾಸ್ ಟ್ಯಾಂಕರ್ ಗೆ ಭರ್ತಿ ಮಾಡಲಾಗುತ್ತದೆ. ಅಪಘಾತವಾದ ಕೂಡಲೇ ಪಿ.ಎಸ್.ಐ. ಮಂಜುನಾಥ ಗೌಡರ್ ಹಾಗೂ ಸಿಬ್ಬಂದಿ ,ಮತ್ತು ಅಂಕೋಲಾದ ಎಲ್.ಪಿ.ಜಿ ಗ್ಯಾಸ್ ಕ್ಷಿಪ್ರ ಕಾರ್ಯಾಚರಣೆಯ ಪ್ರಕಾಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಗ್ಯಾಸ್ ಸೋರಿಕೆ ಇಲವೆಂದು ಖಚಿತಪಡಿಸಿಕೊಂಡ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ರಾತ್ರಿ ಟ್ಯಾಂಕರ್ ಮೇಲಕ್ಕೆತ್ತುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.