ADVERTISEMENT

ಕಾರವಾರ | ಬಳಕೆಯಾಗದ ಜೇತ್ನಾ ಕಟ್ಟಡ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 4:08 IST
Last Updated 22 ಜುಲೈ 2023, 4:08 IST
ಕಾರವಾರದ ಸದಾಶಿವಗಡದ ಗುಡ್ಡದ ತಪ್ಪಲಿನಲ್ಲಿರುವ ಜೇತ್ನಾಕ್ಕೆ ಸೇರಿದ ಕಟ್ಟಡ ಬಳಕೆಗೆ ಬಾರದೆ ಪಾಳುಬಿದ್ದಂತಾಗಿದೆ
ಕಾರವಾರದ ಸದಾಶಿವಗಡದ ಗುಡ್ಡದ ತಪ್ಪಲಿನಲ್ಲಿರುವ ಜೇತ್ನಾಕ್ಕೆ ಸೇರಿದ ಕಟ್ಟಡ ಬಳಕೆಗೆ ಬಾರದೆ ಪಾಳುಬಿದ್ದಂತಾಗಿದೆ   

ಗಣಪತಿ ಹೆಗಡೆ

ಕಾರವಾರ: ತಾಲ್ಲೂಕಿನ ಸದಾಶಿವಗಡದ ಕಾಳಿನದಿಯ ದಡ, ಹಚ್ಚಹಸಿರಿನ ಗುಡ್ಡದ ತಪ್ಪಲಿನಲ್ಲಿ ಲಕ್ಷಾಂತರ ಮೊತ್ತ ವ್ಯಯಿಸಿ ಎಂಟು ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡ ಈಗ ಪಾಳು ಕೊಂಪೆಯಾಗಿದೆ. ಮದ್ಯ, ಮಾದಕ ವಸ್ತುಗಳ ವ್ಯಸನಿಗಳು ಈ ತಾಣದ ಬಳಿ ತಮ್ಮ ಅಡ್ಡೆ ಸ್ಥಾಪಿಸಿಕೊಳ್ಳುತ್ತಿರುವ ಆರೋಪಗಳಿವೆ.

ಕಾಳಿನದಿಯ ದಂಡೆಯಲ್ಲಿರುವ ಜಾಗದಲ್ಲಿ 2015ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿದ್ಯಾರ್ಥಿ ವಸತಿ ನಿಲಯ ಸ್ಥಾಪಿಸಲಾಗಿತ್ತು. ಬಳಿಕ ಕಟ್ಟಡವನ್ನು ಜಲಸಾಹಸ ಚಟುವಟಿಕೆ ನಡೆಸುವ ಉದ್ದೇಶಕ್ಕೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ(ಜೇತ್ನಾ) ಹಸ್ತಾಂತರಿಸಲಾಗಿತ್ತು. ಆರಂಭಿಕ ದಿನಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ಕೈಗೊಂಡಿದ್ದ ಜೇತ್ನಾ ಬಳಿಕ ಅಷ್ಟಾಗಿ ಚಟುವಟಿಕೆ ಕೈಗೊಂಡಿರಲಿಲ್ಲ.

ADVERTISEMENT

ಹೀಗಾಗಿ ಕಟ್ಟಡವನ್ನು 2018ರಲ್ಲಿ ಪ್ರವಾಸಿಗರ ಅನುಕೂಲಕ್ಕೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಕಚೇರಿಗೆ ನೀಡಲಾಗಿತ್ತು. ಕೆಲವು ವರ್ಷಗಳ ಬಳಿಕ ಪುನಃ ಜೇತ್ನಾ ತನ್ನ ಸುಪರ್ದಿಗೆ ಕಟ್ಟಡ ಪಡೆದಿತ್ತು. ಆದರೆ ಕೆಲವು ತಿಂಗಳುಗಳಿಂದ ಕಟ್ಟಡ ಬಳಕೆ ಮಾಡದೆ ಖಾಲಿ ಬಿಡಲಾಗಿದೆ. ಗುಡ್ಡದ ತಪ್ಪಲಿನಲ್ಲಿರುವ ನಿರ್ಜನ ಪ್ರದೇಶದಲ್ಲಿರುವ ಕಟ್ಟಡದ ಬಳಿ ಮದ್ಯ ವ್ಯಸನಿಗಳು, ಗಾಂಜಾ ವ್ಯಸನಿಗಳು ಬಂದು ಮೋಜು ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಜೇತ್ನಾ ಕಟ್ಟಡಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದ್ದು ಜಲಸಾಹಸ ಚಟುವಟಿಕೆ ನಿರಂತರವಾಗಿ ನಡೆಸಲು ಕ್ರಮವಹಿಸಲಾಗುವುದು.
ಅಜ್ಜಪ್ಪ ಸೊಗಲದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ)

‘ಜಲಸಾಹಸ ಚಟುವಟಿಕೆ ಕೈಗೊಳ್ಳಲು ಪೂರಕ ಅವಕಾಶಗಳಿದ್ದರೂ, ಉತ್ತಮ ಕಟ್ಟಡ ಇದ್ದರೂ ಜೇತ್ನಾ ನಿರೀಕ್ಷಿತಮಟ್ಟದಲ್ಲಿ ಚಟುವಟಿಕೆ ಕೈಗೊಂಡಿಲ್ಲ. ಜೇತ್ನಾಕ್ಕೆ ಈಗ ನೀಡಿದ ಕಟ್ಟಡದ ಬಳಿಯೇ ಎರಡೂವರೆ ದಶಕದ ಹಿಂದೆ ನಿರ್ಮಿಸಿದ್ದ ಕಟ್ಟಡವೂ ಸರಿಯಾಗಿ ಬಳಕೆಯಾಗದೆ ಪಾಳುಬಿದ್ದಿದೆ. ಅಲ್ಲಿ ಲಕ್ಷಾಂರ ಮೌಲ್ಯದ ಸರ್ಫಿಂಗ್ ಬೋಟುಗಳು, ರ‍್ಯಾಫ್ಟಿಂಗ್ ದೋಣಿಗಳು ಸೇರಿದಂತೆ ಹಲವು ಉಪಕರಣಗಳು ಬಳಕೆಗೆ ಬಾರದ ಸ್ಥಿತಿಯಲ್ಲಿವೆ’ ಎಂದು ಜಲಸಾಹಸಿಯೊಬ್ಬರು ದೂರಿದರು.

‘ಕಟ್ಟಡಕ್ಕೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅವುಗಳನ್ನು ಒದಗಿಸಿಕೊಳ್ಳಲು ತಡವಾಗಿದೆ. ಆಗಸ್ಟ್‌ನಿಂದ ಜಲಸಾಹಸ ತರಬೇತಿ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಗಮನಕ್ಕೂ ತರಲಾಗಿದೆ’ ಎಂದು ಜೇತ್ನಾದ ಹಿರಿಯ ತರಬೇತುದಾರ ಪ್ರಕಾಶ ಹರಿಕಂತ್ರ ಪ್ರತಿಕ್ರಿಯಿಸಿದರು.

ಕಾಂಕ್ರೀಟ್ ಜಟ್ಟಿ ಬಳಕೆಗೆ ಪೈಪೋಟಿ!

ಜೇತ್ನಾಕ್ಕೆ ನೀಡಿದ ಕಟ್ಟಡದ ಸಮೀಪವೇ ಕಾಳಿನದಿಯಲ್ಲಿ ಸಾಗರಮಾಲಾ ಯೋಜನೆ ಅಡಿ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಕೆಯಾಗಿದೆ. ಪ್ರವಾಸೋದ್ಯಮ ಉದ್ದೇಶಕ್ಕೆ ಜಟ್ಟಿ ನಿರ್ಮಿಸಲಾಗಿದೆ ಎಂದು ಬಂದರು ಅಧಿಕಾರಿಗಳು ಹೇಳುತ್ತಿದ್ದು ಇದನ್ನು ಜಲಸಾಹಸ ಚಟುವಟಿಕೆ ಉದ್ದೇಶಕ್ಕೆ ಬಳಸಿಕೊಳ್ಳಲು ಜೇತ್ನಾ ಪ್ರಯತ್ನಿಸುತ್ತಿದೆ.

‘ಕಾಳಿನದಿಯಲ್ಲಿ ಜಲಸಾಹಸ ಚಟುವಟಿಕೆಗೆ ಪೂರಕ ಅವಕಾಶವಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣವಿದ್ದು ಜೇತ್ನಾಕ್ಕೆ ಜಟ್ಟಿ ಬಳಕೆಗೆ ಅವಕಾಶ ನೀಡಬೇಕು’ ಎಂದು ಜೇತ್ನಾ ತರಬೇತುದಾರ ಪ್ರಕಾಶ ಹರಿಕಂತ್ರ ಹೇಳಿದರು. ‘ಪ್ರವಾಸೋದ್ಯಮ ಉದ್ದೇಶಕ್ಕೆ ಜಟ್ಟಿ ಸ್ಥಾಪಿಸಲಾಗಿದೆ. ಈ ಹಿಂದೆ ಇಲ್ಲಿ ಜಂಗಲ್ ಲಾಡ್ಜಸ್ ರೆಸಾರ್ಟ್‍ಗೆ ಕಚೇರಿ ನೀಡಲಾಗಿತ್ತು. ಪ್ರವಾಸಿಗರ ನದಿಯಾನಕ್ಕೆ ಈ ತಾಣ ಪ್ರಶಸ್ತವಾಗಿದ್ದು ಪ್ರವಾಸಿ ಚಟುವಟಿಕೆಗೆ ಪ್ರಾಧಾನ್ಯತೆ ನೀಡಲು ಜಟ್ಟಿ ಪಡೆಯಲು ಚಿಂತಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.