ADVERTISEMENT

ಕೋವಿಡ್‌-19: ಅತಿ ರಂಜಿತ ವಿಷಯಕ್ಕೆ ಆದ್ಯತೆ ಬೇಡ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 11:43 IST
Last Updated 20 ಜುಲೈ 2020, 11:43 IST
   

ಕಾರವಾರ: ‘ಕೋವಿಡ್ ಒಂದೇ ಖಂಡಿತ ಅತ್ಯಂತ ಭಯಾನಕ ಕಾಯಿಲೆಯಲ್ಲ. ಅತಿರಂಜಿತ ವಿಷಯಗಳಿಂದ ಗಾಬರಿಯಾಗುವ ಅಗತ್ಯವೇ ಇಲ್ಲ. ಹಾಗೆಂದು, ಇದನ್ನು ತಡೆಗಟ್ಟುವ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಮಾತ್ರ ಅತ್ಯಗತ್ಯ..’

ಮುಂಬೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ, ಕೋವಿಡ್‌ನಿಂದ ಗುಣಮುಖರಾಗಿರುವ ಕುಮಟಾದ 28 ವರ್ಷದ ಯುವಕರೊಬ್ಬರ ಅನಿಸಿಕೆಯಿದು.

‘ನಾನು ಸುಮಾರು ಎರಡು ತಿಂಗಳ ಹಿಂದೆಯೇ ಬಂದಿದ್ದೇನೆ. ಅಲ್ಲಿಂದರೈಲಿನಲ್ಲಿ ಹೊರಡುವಾಗ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿರಲಿಲ್ಲ. ಊರಿಗೆ ಮರಳಿ ಕ್ವಾರಂಟೈನ್ ಆದ ನಂತರವೂ ನಾನು ಆರೋಗ್ಯವಾಗಿಯೇ ಇದ್ದೆ. ಆದರೆ, ಗಂಟಲುದ್ರವದ ಮಾದರಿಯ ಪರೀಕ್ಷಾ ವರದಿ ಬಂದಾಗ ಕೋವಿಡ್ ಪಾಸಿಟಿವ್ ಇರುವುದು ಗೊತ್ತಾಯಿತು...’

ADVERTISEMENT

‘ನನ್ನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೂ ನನ್ನಿಂದಾಗಿ ಇತರರಿಗೆ ತೊಂದರೆಯಾಗುವ ಸಾಧ್ಯತೆಯಿತ್ತು. ಹಾಗಾಗಿ ಚಿಕಿತ್ಸೆ ಪಡೆದುಕೊಂಡೆ. ಕಾರವಾರದ ಕ್ರಿಮ್ಸ್‌ನಲ್ಲಿ ವೈದ್ಯರು ಹೇಳಿದ ಎಲ್ಲ ಚಿಕಿತ್ಸಾ ವಿಧಾನಗಳನ್ನು ಚಾಚೂ ತಪ್ಪದೇ ಪಾಲಿಸಿದೆ. ಕೊನೆಗೆ ಸೋಂಕಿನಿಂದ ಸಂಪೂರ್ಣ ಮುಕ್ತನಾದೆ. ಇದರಿಂದ ನನ್ನ ಶರೀರದ ತೂಕದಲ್ಲಿ ವ್ಯತ್ಯಾಸದಂತಹ ಯಾವುದೇ ಬದಲಾವಣೆಯೂ ಆಗಿಲ್ಲ...’

‘ಕೋವಿಡ್ ಬಗ್ಗೆ ಭಯ ಹುಟ್ಟಿಸುವ ಬದಲು ಅರಿವು ಮೂಡಿಸಬೇಕಾಗಿದೆ. ಪುರಾತನ ಕಾಲದಿಂದಲೂ ಹೇಳಿದಂತೆ ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಳ್ಳುವುದು, ಮನೆಗೆ ಬಂದ ಕೂಡಲೇ ಕೈ ಕಾಲು ಮುಖವನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು, ಸ್ನಾನ ಮಾಡುವುದು ಮುನ್ನೆಚ್ಚರಿಕೆಯ ಭಾಗವಾಗಿವೆ. ರೋಗ ನಿರೋಧಕ ಶಕ್ತಿ ವೃದ್ಧಿಗೆ ಅಗತ್ಯವಾದ ಆಹಾರವನ್ನು ಸ್ವೀಕರಿಸುವುದೂ ಮುಖ್ಯವಾಗುತ್ತದೆ...’

‘ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳೇ ತುಂಬಿದ್ದರೆ ದೃಢಕಾಯದವನಿಗೂ ಯಾವುದೋ ಆರೋಗ್ಯ ಸಮಸ್ಯೆಯಿದೆ ಎಂಬ ರೀತಿಯಲ್ಲೇ ಬಿಂಬಿತನಾಗಬಹುದು. ಆದರೆ, ಸಕಾರಾತ್ಮಕ ಯೋಚನೆಗಳನ್ನು ಹೊಂದಿ ವೈದ್ಯರ ಸೂಚನೆಗಳನ್ನು ಪಾಲಿಸಿದರೆ ಕೋವಿಡ್ ವಿರುದ್ಧದ ಹೋರಾಟ ಸ್ವಲ್ಪವೂ ಕಷ್ಟವಲ್ಲ.ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳನ್ನು ನಂಬದಿರುವುದು ಮನಸ್ಸಿಗೂ ಆ ಮೂಲಕ ಆರೋಗ್ಯಕ್ಕೂ ಸಹಕಾರಿಯಾಗಬಲ್ಲದು.’

– ನಿರೂಪಣೆ: ಸದಾಶಿವ ಎಂ.ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.