ADVERTISEMENT

ಹೊನ್ನಾವರ: ಅಪಾಯಕಾರಿ ‘ಗೋಮಾಫಿಯಾ’

ಚಿರತೆ ದಾಳಿಯ ಲಾಭ ಪಡೆದಿರುವ ಗೋಕಳ್ಳರು: ಶಂಕೆ

ಎಂ.ಜಿ.ಹೆಗಡೆ
Published 20 ಜನವರಿ 2025, 4:59 IST
Last Updated 20 ಜನವರಿ 2025, 4:59 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೊನ್ನಾವರ: ತಾಲ್ಲೂಕಿನ ಸಾಲ್ಕೋಡ ಕೊಂಡಾಕುಳಿ ಸಮೀಪ ಗುಡ್ಡವೊಂದರಲ್ಲಿ ಭಾನುವಾರ ಪತ್ತೆಯಾಗಿರುವ ಹಸುವೊಂದರ ಕಳೆಬರದ ಚೂರುಗಳು ಮಾನವನ ಕ್ರೌರ್ಯವನ್ನು ಅನಾವರಣಗೊಳಿಸಿರುವ ಜೊತೆಗೆ ಕಳೆದ ಕೆಲ ವರ್ಷಗಳಿಂದ ತಾಲ್ಲೂಕಿನೆಲ್ಲೆಡೆ ‘ಗೋ ಮಾಫಿಯಾ’ ಜಾಗೃತವಾಗಿರುವ ಶಂಕೆಗೆ ಇನ್ನಷ್ಟು ಬಲ ನೀಡಿದೆ.

ತಾಲ್ಲೂಕಿನಲ್ಲಿ ಗೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು ಗೋ ಮಾಫಿಯ ಕೂಡ ಗೋವುಗಳ ಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣ ಎಂಬ ಸಾರ್ವಜನಿಕ ಅಭಿಪ್ರಾಯದೊಂದಿಗೆ ಕಳೆದ ತಿಂಗಳು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ಗೋವುಗಳನ್ನು ಕದ್ದು ಸಾಗಣೆ ಮಾಡುವ ವ್ಯವಸ್ಥಿತ ಜಾಲವಿರುವ ಬಗ್ಗೆ ತಾಲ್ಲೂಕಿನ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಚಿಕ್ಕನಕೋಡ ಸಮೀಪ ಕಳೆದ ಜ.3ರಂದು ಕಾರಿನ ಡಿಕ್ಕಿಯಲ್ಲಿ ನಮ್ಮ ಆಕಳು ತುಂಬುತ್ತಿರುವಾಗ ಆಕಸ್ಮಿಕವಾಗಿ ಅಲ್ಲಿಗೆ ಬಂದ ಇಬ್ಬರು ಆಟೊ ಚಾಲಕರನ್ನು ನೋಡಿ ಆಕಳ ಕಳ್ಳರು ಅಲ್ಲಿಂದ ಪರಾರಿಯಾದರು' ಎಂದು ಚಿಕ್ಕನಕೋಡ ಗ್ರಾಮದ ಕೂಮನಕೆರೆಯ ಪ್ರಸಾದ ಭಟ್ಟ ನೆನಪಿಸಿದರು.

ಗೋಕಳ್ಳತನ ವ್ಯಾಪಕವಾಗಿದ್ದರೂ ಪೊಲೀಸ್ ಠಾಣೆಯಲ್ಲಿ ಅದೇ ಸಂಖ್ಯೆಯಲ್ಲಿ ದೂರು ದಾಖಲಾಗುತ್ತಿಲ್ಲ. ಪೊಲೀಸರು ಇಂಥ ದೂರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬ ಆಪಾದನೆ ಕೇಳಿಬರುತ್ತಿದೆ.

‘ಮೇಯಲು ಬಿಟ್ಟಿದ್ದ ಎರಡು ಆಕಳು ಕಾಣೆಯಾಗಿರುವ ಕುರಿತಂತೆ ಎರಡು ಪ್ರತ್ಯೇಕ ದೂರು ನೀಡಿದ್ದೆ. ವರ್ಷಗಳು ಕಳೆದರೂ ನಮ್ಮ ಆಕಳಿನ ಕಥೆ ಏನಾಯಿತೆಂದು ತಿಳಿಯಲೇ ಇಲ್ಲ’ ಎಂದು ಇದೇ ಗ್ರಾಮದ ರೈತ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಲ್ಲಿ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಆಕಳು ಕಾಣೆಯಾದ ನಾಲ್ಕು ದೂರುಗಳು ದಾಖಲಾಗಿದ್ದು ಯಾವ ಪ್ರಕರಣದಲ್ಲೂ ಆರೋಪಿಗಳ ಪತ್ತೆಯಾಗಿಲ್ಲ ಎನ್ನುವುದನ್ನು ದಾಖಲೆ ತಿಳಿಸುತ್ತದೆ.

ಗೋ ಕಳ್ಳತನಕ್ಕೆ ಹೋಲಿಸಿದರೆ ಚಿರತೆ ದಾಳಿಗೆ ಆಕಳು ಬಲಿಯಾದ ಘಟನೆಗಳು ತೀರ ಕಡಿಮೆ; ಇಂಥ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಒಂದೆರಡು ಮಾತ್ರ ನಡೆದಿವೆ. ಆದರೆ ಚಿರತೆ ದಾಳಿಯ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಚಿರತೆಯನ್ನು ‘ಆರೋಪಿ’ ಸ್ಥಾನದಲ್ಲಿ ನಿಲ್ಲಿಸಿದ ಪರಿಯಲ್ಲಿ ಗೋಕಳ್ಳತನ ಹಾಗೂ ಗೋಕಳ್ಳರನ್ನು ಪರಿಗಣಿಸಲಾಗುತ್ತಿಲ್ಲ’ ಎಂಬ ವ್ಯಂಗ್ಯದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಗೋಕಳ್ಳರು ಚಿರತೆ ದಾಳಿ ಶಂಕೆಯ ಲಾಭ ಪಡೆದಿರುವ ಸಾಧ್ಯತೆ ಕೂಡ ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.