ADVERTISEMENT

ಗೋಕರ್ಣ: ಮೇಲುಸ್ತುವಾರಿ ಸಮಿತಿಗೆ ಸದಸ್ಯರ ನೇಮಕ

ಮರಳಿ ಸಮಿತಿ ಸೇರಿದ ಉಪಾಧಿವಂತ ಸದಸ್ಯರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 15:50 IST
Last Updated 19 ಆಗಸ್ಟ್ 2024, 15:50 IST
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.  
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.     

ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನ ಆಡಳಿತಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಮೇಲುಸ್ತುವಾರಿ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ಆಧರಿಸಿ ರಾಜ್ಯ ಸರ್ಕಾರ ಈ ಹಿಂದೆ ನೇಮಿಸಿದ್ದ ನಾಲ್ಕು ಜನ ಸದಸ್ಯರನ್ನು ಮರು ನೇಮಿಸಿ ಆದೇಶಿಸಿದೆ.

ಉಪಾಧಿವಂತರಾದ ಗೋಕರ್ಣದ ವಿದ್ವಾನ್ ಗಣಪತಿ ಶಿವರಾಮ ಭಟ್ ಹಿರೇಭಟ್ಟ, ವಿದ್ವಾನ್ ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ಪರಿಣಿತ ವಿದ್ವಾಂಸರಾದ ವಿದ್ವಾನ್ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಮತ್ತು ಮಹೇಶ ಗಣೇಶ ಹಿರೇಗಂಗೆ ಅವರನ್ನು ನೇಮಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಮಿತಿಗೆ ಈ ನಾಲ್ವರು ಸದಸ್ಯರನ್ನು ನೇಮಿಸಿದ್ದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ತಂದಿತ್ತು. ಇದರಿಂದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ನಾಲ್ವರು ಸಮಿತಿ ಸದಸ್ಯರಾಗಿ ಮುಂದುವರೆದಿದ್ದರು. ತಡೆಯಾಜ್ಞೆ ವಿರುದ್ಧ ಸರ್ಕಾರವು ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜು.29 ರಂದು ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದ ಹೊಸ ಸಮಿತಿಗೆ ಅಧಿಕಾರದಲ್ಲಿ ಮುಂದುವರೆಯಲು ನಿರ್ದೇಶನ ನೀಡಿತ್ತು.

ADVERTISEMENT

ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ, ಉಪಾಧ್ಯಕ್ಷರಾಗಿ ಉತ್ತರ ಕನ್ನಡದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು, ಸದಸ್ಯರಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಾಲ್ವರು ಉಪಾಧಿವಂತ, ವಿದ್ವಾಂಸ ಸದಸ್ಯರು ಹಾಗೂ ಕಾರ್ಯದರ್ಶಿಯಾಗಿ ಕುಮಟಾ ಉಪ ವಿಭಾಗಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.