ಗೋಕರ್ಣ : ಇಲ್ಲಿಯ ಮಹಾಬಲೇಶ್ವರ ದೇವಸ್ಥಾನಕ್ಕೆ ದೇವರ ಉತ್ಸವ ಮೂರ್ತಿ ಕೂರಿಸಲು ಭಕ್ತರೊಬ್ಬರು ಮರದ ಕುರ್ಚಿಗೆ ಸುಮಾರು ₹ 9 ಲಕ್ಷ ವೆಚ್ಚದಲ್ಲಿ ಬೆಳ್ಳಿ ಲೇಪಿಸಿ ಭಾನುವಾರ ಸಂಜೆ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ.
ಹೈದರಾಬಾದಿನ ವೆಂಕಟಲಕ್ಷ್ಮೀ ಪುಟ್ಟಮ್ಮ ರೆಡ್ಡಿ ಎಂಬ ಭಕ್ತ ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಅವರ ಪ್ರತಿನಿಧಿ ಭಾನುವಾರ ಗೋಕರ್ಣಕ್ಕೆ ಬಂದು, ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ದೇವರಿಗೆ ಸಮರ್ಪಿಸಿದ್ದಾರೆ. ಈ ಹಿಂದೆ ವೆಂಕಟಲಕ್ಷ್ಮೀ ಅವರು ಗೋಕರ್ಣಕ್ಕೆ ಭೇಟಿಯಿತ್ತಾಗ ಉತ್ಸವ ಮೂರ್ತಿಯನ್ನು ಮರದ ಕುರ್ಚಿಯಲ್ಲಿ ಕೂರಿಸುವುದನ್ನು ನೋಡಿದ್ದರು. ಆಗಲೇ ಅದಕ್ಕೆ ಬೆಳ್ಳಿ ಲೇಪಿಸಿ ಕೊಡುವ ನಿರ್ಧಾರ ಕೈಗೊಂಡಿದ್ದರು. ಆದರೆ ತಾಂತ್ರಿಕ ಕಾರಣದಿಂದ ದೇವಸ್ಥಾನದ ಮರದ ಕುರ್ಚಿಯನ್ನು ಅವರಿಗೆ ಹಸ್ತಾಂತರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅವರೆ ಸ್ವತಃ ಹೊಸದಾದ ಮರದ ಕುರ್ಚಿಯನ್ನು ತಯಾರಿಸಿ ಅದಕ್ಕೆ ಬೆಳ್ಳಿ ಲೇಪಿಸಿ ತಮ್ಮ ಇಚ್ಛೆಯಂತೆ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ವೇ.ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ಸ್ಥಳೀಯ ಪುರೋಹಿತರು ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.