
ಗೋಕರ್ಣ: ಗೋಕರ್ಣ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ 2ನೇ ಆವೃತ್ತಿ ನ. 15 ರಿಂದ ಆರಂಭವಾಗಿ 21 ರಂದು ಮುಗಿಯಲಿದೆ. ಗೋಕರ್ಣದ ಗೋಗರ್ಭ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಮುಗಿದಿದೆ.
ಗಂಗಾವಳಿಯಿಂದ ಮಾದನಗೇರಿಯವರೆಗಿನ ಆಟಗಾರರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಹರಾಜಿನಲ್ಲಿ ಆಯ್ಕೆಯದ ಆಟಗಾರರು ಮಾತ್ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದು. ಪಂದ್ಯಾವಳಿಯಲ್ಲಿ 8 ಫ್ರಾಂಚೈಸಿ ತಂಡಗಳು ಮತ್ತು 2 ಸಂಘಟಕರ ತಂಡ ಪಾಲ್ಗೊಳ್ಳಲಿದೆ.
ಫ್ರಾಂಚೈಸಿ ಪ್ರವೇಶ ಶುಲ್ಕ ಪ್ರತಿ ತಂಡಕ್ಕೆ ₹ 15,000 ನಿಗದಿ ಪಡಿಸಲಾಗಿದೆ. ಪ್ರಥಮ ಬಹುಮಾನ ₹ 50,000, ದ್ವಿತೀಯ ಬಹುಮಾನ ₹ 30,000 ಇರಲಿದೆ. ಪ್ರತಿ ತಂಡಕ್ಕೆ 4 ಲೀಗ್ ಪಂದ್ಯಾವಳಿ ಇರಲಿದ್ದು, ಪ್ರತಿ ಲೀಗ್ ಪಂದ್ಯವು 10 ಓವರ್ ಮತ್ತು ಮುಂದಿನ ಹಂತದ ಪಂದ್ಯಗಳಲ್ಲಿ ಓವರ್‌ಗಳಲ್ಲಿ ಬದಲಾವಣೆ ಇರುತ್ತದೆ
ಫ್ರಾಂಚೈಸಿ ಮಾಲೀಕರು ಆಟದಲ್ಲಿ ಭಾಗವಹಿಸಬಹುದು. ಹರಾಜಿನಲ್ಲಿ ಖರೀದಿಸಿದ ಆಟಗಾರರ ಖರ್ಚು ವೆಚ್ಚ ಫ್ರಾಂಚೈಸಿ ಮಾಲೀಕರದ್ದೇ ಆಗಿರುತ್ತದೆ. ಪಂದ್ಯಾವಳಿ ದಿನಗಳಲ್ಲಿ ಮಂಡಳಿ ವತಿಯಿಂದ ಊಟದ ವ್ಯವಸ್ಥೆ ಇರುತ್ತದೆ. ಪಂದ್ಯಗಳನ್ನು ಪ್ರಸ್ತುತ ಐಸಿಸಿ ನಿಯಮಗಳ ಪ್ರಕಾರ ಆಡಿಸಲಾಗುತ್ತದೆ. ಯಾವುದೇ ತಂಡದ ಆಟಗಾರರು ಅಸಭ್ಯವಾಗಿ ವರ್ತಿಸಿದಲ್ಲಿ ತಂಡವನ್ನು ಅಥವಾ ಆಟಗಾರರನ್ನು ಅನರ್ಹ ಗೊಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.