ADVERTISEMENT

ಗೋಕರ್ಣ ದೇಗುಲ ಹಸ್ತಾಂತರ ಪ್ರಕ್ರಿಯೆ ಮುಕ್ತಾಯ

ಇನ್ನುಮುಂದೆ ‘ಸುಪ್ರೀಂ’ ನೇಮಿಸಿದ ಸಮಿತಿಯಿಂದ ದೇವಸ್ಥಾನ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 14:48 IST
Last Updated 8 ಮೇ 2021, 14:48 IST
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಹಸ್ತಾಂತರಿಸಿಕೊಂಡ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ  ಹಿಂದಿನ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಇದ್ದಾರೆ 
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಹಸ್ತಾಂತರಿಸಿಕೊಂಡ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ  ಹಿಂದಿನ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಇದ್ದಾರೆ    

ಗೋಕರ್ಣ: ಸುಪ್ರೀಂ ಕೋರ್ಟ್ ಆದೇಶದಂತೆ ರಾಮಚಂದ್ರಾಪುರ ಮಠದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಸ್ತಾಂತರ ಪ್ರಕ್ರಿಯೆ ಶನಿವಾರ ಮುಕ್ತಾಯವಾಗಿದೆ. ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್ ಅವರಿಗೆ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಅಧಿಕಾರ ಹಸ್ತಾಂತರಿಸಿದರು.

ದೇವಸ್ಥಾನದ ಆಭರಣ, ಸ್ಥಿರಾಸ್ತಿ, ಚರಾಸ್ತಿ, ಹಣಕಾಸು, ಬ್ಯಾಂಕ್ ಖಾತೆಗಳನ್ನೆಲ್ಲಾ ಪರಿಶೀಲಿಸಿದ ಅಜಿತ್, ತಮ್ಮ ವಶಕ್ಕೆ ಪಡೆದರು.

‘ಸದ್ಯಕ್ಕೆ ದಿನನಿತ್ಯದ ವ್ಯವಹಾರಗಳು ಮುಂಚಿನಂತೆ ನಡೆಯಲಿವೆ. ದೇವಸ್ಥಾನದ ಉಸ್ತುವಾರಿಯನ್ನು ಇಲ್ಲಿಯ ಕಂದಾಯ ಅಧಿಕಾರಿ ನೋಡಿಕೊಳ್ಳಲಿದ್ದಾರೆ. ಕೋವಿಡ್ ಕಾರಣದಿಂದ ಭಕ್ತರಿಗೆ ಪೂಜೆಗೆ ಅವಕಾಶ ಇಲ್ಲ. ಹಾಗಾಗಿ ಮುಂದಿನ ನಿರ್ಧಾರವನ್ನು ನಂತರ ಸಮಿತಿ ತೆಗೆದುಕೊಳ್ಳಲಿದೆ’ ಎಂದು ಅವರು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದರು. ಸಮಿತಿಯ ಇತರ ಸದಸ್ಯರೊಂದಿಗೆ ಸ್ವಲ್ಪಹೊತ್ತು ಚರ್ಚೆ ನಡೆಸಿದರು. ಸಮಿತಿಯ ಸದಸ್ಯರಾದ ಮಹಾಬಲ ಉಪಾಧ್ಯ, ದತ್ತಾತ್ರೇಯ ಹಿರೇಗಂಗೆ, ಪರಮೇಶ್ವರ ಮಾರ್ಕಾಂಡೆ, ಕಂದಾಯ ಅಧಿಕಾರಿ ಕೆ.ಎಸ್.ಗೊಂಡ, ಪಿ.ಎಸ್.ಐ ನವೀನ್ ನಾಯ್ಕ ಇದ್ದರು.

ದೇವಸ್ಥಾನದ ಹಿಂದಿನ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಪ್ರತಿಕ್ರಿಯಿಸಿ, ‘ದೇವಸ್ಥಾನ 13 ವರ್ಷಗಳಲ್ಲಿ ತುಂಬಾ ಅಭಿವೃದ್ಧಿಯಾಗಿದೆ. ಹಿಂದಿನ ಟ್ರಸ್ಟ್‌ ಬ್ಯಾಂಕಿನಲ್ಲಿ ಇಟ್ಟಿದ್ದ ಠೇವಣಿ ಹಣ ಬಡ್ಡಿ ಸಮೇತ ಜಮೆ ಆಗಿದೆ. ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ ಹಾಗೆಯೇ ಇದೆ’ ಎಂದರು.

‘ಕರ್ಣಾಟಕ ಬ್ಯಾಂಕಿನಲ್ಲಿ ₹1.57 ಕೋಟಿ ಬಡ್ಡಿ ಸೇರಿ ಹಾಗೇ ಇದೆ. ಅದನ್ನು ಬಿಟ್ಟು ₹1.19 ಕೋಟಿ ಠೇವಣಿ ಇಟ್ಟಿದ್ದೇವೆ. ಒಟ್ಟು ₹ 2.76 ಕೋಟಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಚಾಲ್ತಿ ಖಾತೆಯಲ್ಲಿ ₹ 54.24 ಲಕ್ಷ ಇಡಲಾಗಿದೆ. ಇಲ್ಲಿಯವರೆಗೆ ₹60 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಜನರಿಗೆ ಅಮೃತಾನ್ನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.