ADVERTISEMENT

ಶಿರಸಿ: ಆಕಳ ಹೊಟ್ಟೆ ಸೇರಿದ್ದ ಚಿನ್ನ ಶಸ್ತ್ರಚಿಕಿತ್ಸೆಯಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 13:44 IST
Last Updated 8 ಡಿಸೆಂಬರ್ 2021, 13:44 IST
ಆಕಳ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾದ ಚಿನ್ನದ ಸರ
ಆಕಳ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾದ ಚಿನ್ನದ ಸರ   

ಶಿರಸಿ: ತಾಲ್ಲೂಕಿನ ಸಂಕದಮನೆಯ ಹೈನುಗಾರರೊಬ್ಬರ ಮನೆಯ ಆಕಳು ಒಂದು ತಿಂಗಳ ಹಿಂದೆ ನುಂಗಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಮಂಗಳವಾರ ಸಂಜೆ ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ ತೆಗೆಯಲಾಗಿದೆ.

ಶ್ರೀಕಾಂತ ಹೆಗಡೆ ಎಂಬುವವರಿಗೆ ಸೇರಿದ ಆಕಳು ಇದಾಗಿದ್ದು, ನ.5 ರಂದು ದೀಪಾವಳಿ ಅಂಗವಾಗಿ ಗೋಪೂಜೆ ಸಲ್ಲಿಸಲು ಬಂಗಾರದ ಸರವನ್ನು ಆಕಳ ಎದುರು ಇಟ್ಟಿದ್ದರು. ಈ ವೇಳೆ ಸರ ಕಾಣೆಯಾಗಿತ್ತು. ಸರಕ್ಕಾಗಿ ಹುಡುಕಾಟ ನಡೆಸಿದ ಮನೆಯವರು ನಂತರ ಆಕಳು ನುಂಗಿರಬಹುದು ಎಂದು ಶಂಕಿಸಿದ್ದರು.

ಘಟನೆ ನಡೆದ ತಿಂಗಳ ಬಳಿಕ ಪಶುವೈದ್ಯರಿಗೆ ವಿಷಯ ತಿಳಿಸಲಾಗಿತ್ತು. ಆಕಳ ಹೊಟ್ಟೆಯನ್ನು ಲೋಹಪರಿಶೋಧಕದ ಮೂಲಕ ಪರಿಶೀಲಿಸಿದ್ದ ಡಾ.ಪಿ.ಎಸ್.ಹೆಗಡೆ ಸರ ನುಂಗಿರುವುದನ್ನು ದೃಢಪಡಿಸಿಕೊಂಡಿದ್ದರು. ಮಂಗಳವಾರ ಸಂಜೆ ಉಮ್ಮಚಗಿಯ ಪಶುವೈದ್ಯ ಡಾ.ರಾಜೇಶ್ ಜತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರಕ್ಕೆ ತೆದಿದ್ದಾರೆ.

ADVERTISEMENT

‘ಆಕಳ ಹೊಟ್ಟೆಯ ಒಳಭಾಗದಲ್ಲಿ ಜೇನುಗೂಡಿನಂತ ರಚನೆ ಇರುವ ಜಾಗದಲ್ಲಿ ಸರ ಸಿಲುಕೊಂಡಿತ್ತು. ಅದನ್ನು ಹೊರಕ್ಕೆ ತೆಗೆಯಲಾಗಿದ್ದು ಆಕಳ ಆರೋಗ್ಯ ಸುಧರಣೆಯಾಗುತ್ತದೆ. ಹೈನುಗಾರರು ಇಂತಹ ವಸ್ತುವನ್ನು ಆಕಳ ಸಮೀಪ ಇಡದಂತೆ ಎಚ್ಚರವಹಿಸಬೇಕು’ ಎಂದು ಡಾ.ಪಿ.ಎಸ್.ಹೆಗಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.