ADVERTISEMENT

ಉತ್ತರ ಕನ್ನಡದ ಕರಾವಳಿಯಲ್ಲಿ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:09 IST
Last Updated 12 ಜೂನ್ 2020, 12:09 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಕಂಡುಬಂದ ಬೃಹತ್ ಅಲೆಗಳು.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಕಂಡುಬಂದ ಬೃಹತ್ ಅಲೆಗಳು.   

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಗುರುವಾರ ಶುರುವಾದ ಜೋರಾದ ಮಳೆ ಶುಕ್ರವಾರವೂ ಮುಂದುವರಿಯಿತು. ದಿನವಿಡೀ ಐದು ಹತ್ತು ನಿಮಿಷಗಳ ಬಿಡುವಿನ ಬಳಿಕ ಮತ್ತೆ ರಭಸವಾಗಿ ಸುರಿಯಿತು.

ಕಾರವಾರದಲ್ಲಿ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳ ರಸ್ತೆಗಳಲ್ಲಿ ನೀರು ನಿಂತಿದೆ. ಚರಂಡಿಗಳಲ್ಲಿ ನೀರು ಭರ್ತಿಯಾಗಿ ಹರಿಯುತ್ತಿದೆ.ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮೀನುಗಾರರು ಈಗಾಗಲೇ ಬಂದರಿಗೆ ವಾಪಸಾಗಿದ್ದು, ದೋಣಿಗಳನ್ನು ಲಂಗರು ಹಾಕಿದ್ದಾರೆ.

ಭಟ್ಕಳ, ಹೊನ್ನಾವರ, ಅಂಕೋಲಾದಲ್ಲೂ ಮಧ್ಯಾಹ್ನದವರೆಗೆ ಬಿರುಸಾಗಿ ಮಳೆ ಸುರಿಯಿತು. ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಆಗಾಗ ಜೋರಾಗಿ ಗಾಳಿ ಬೀಸುತ್ತಿತ್ತು. ಸಾಧಾರಣ ಮಳೆಯಾಯಿತು.

ADVERTISEMENT

ಗುರುವಾರ ಬೆಳಿಗ್ಗೆ 8ರಿಂದ ಶುಕ್ರವಾರ ಬೆಳಿಗ್ಗೆ 8ರವರೆಗೆ ಹೊನ್ನಾವರದಲ್ಲಿ 8.9 ಸೆ.ಮೀ, ಕಾರವಾರದಲ್ಲಿ 8.1 ಸೆಂ.ಮೀ, ಕುಮಟಾದಲ್ಲಿ 7.1 ಸೆಂ.ಮೀ, ಅಂಕೋಲಾದಲ್ಲಿ 7 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.