ADVERTISEMENT

ಭಾನುವಾರವೂ ಜನರಿಂದ ಉತ್ತಮ ಸ್ಪಂದನ

ಬೆಳಿಗ್ಗೆ ಅಂಗಡಿಗಳ ಮುಂದೆ ಜನದಟ್ಟಣೆ, ನಂತರ ರಸ್ತೆಗಳೆಲ್ಲ ಖಾಲಿ ಖಾಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 13:49 IST
Last Updated 25 ಏಪ್ರಿಲ್ 2021, 13:49 IST
ವಾರಾಂತ್ಯ ಕರ್ಫ್ಯೂ ಕಾರಣದಿಂದ ಕಾರವಾರದ ಗ್ರೀನ್‌ಸ್ಟ್ರೀಟ್ ಭಾನುವಾರ ಖಾಲಿಯಾಗಿತ್ತು
ವಾರಾಂತ್ಯ ಕರ್ಫ್ಯೂ ಕಾರಣದಿಂದ ಕಾರವಾರದ ಗ್ರೀನ್‌ಸ್ಟ್ರೀಟ್ ಭಾನುವಾರ ಖಾಲಿಯಾಗಿತ್ತು   

ಕಾರವಾರ: ಕೋವಿಡ್ ನಿಯಂತ್ರಣದ ಸಲುವಾಗಿ ವಾರಾಂತ್ಯದ ಕರ್ಫ್ಯೂಗೆ ನಗರದಲ್ಲಿ ಭಾನುವಾರವೂ ಜನರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು. ನಾಗರಿಕರು ಮನೆಗಳಲ್ಲೇ ಉಳಿದುಕೊಂಡ ಕಾರಣ ನಗರದ ರಸ್ತೆಗಳೆಲ್ಲ ಬಿಕೊ ಎನ್ನುತ್ತಿತ್ತು.

ಬೆಳಿಗ್ಗೆ 6ರಿಂದ 10ರ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದ ಕಾರಣ ಆ ಅವಧಿಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂತು. ತರಕಾರಿ ಖರೀದಿಗೆ ನೂರಾರು ಮಂದಿ ಏಕಕಾಲಕ್ಕೆ ಸೇರಿದ್ದರು. ಇದೇ ರೀತಿ, ಹಾಲಿನ ಖರೀದಿಗೂ ಸಾಕಷ್ಟು ಜನದಟ್ಟಣೆ ಕಂಡುಬಂತು.

‘ಕ್ರಿಮ್ಸ್’ ವರದಿ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಕ್ರಿಮ್ಸ್) ಭಾನುವಾರ ನೀಡಿದ ವರದಿಯ ಪ್ರಕಾರ, ಕೋವಿಡ್ ಆಸ್ಪತ್ರೆಗೆ ಈವರೆಗೆ ಒಟ್ಟು 1,095 ಸೋಂಕಿತರನ್ನು ದಾಖಲಿಸಲಾಗಿದೆ. ಅವರಲ್ಲಿ 952 ಮಂದಿ ಗುಣಮುಖರಾಗಿದ್ದಾರೆ. 76 ಸೋಂಕಿತರು ಮೃತಪಟ್ಟಿದ್ದಾರೆ.

ADVERTISEMENT

ಸದ್ಯ 51 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಎಂಟು ಮಂದಿ ಕೋವಿಡ್ ಜನರಲ್ ವಾರ್ಡ್‌ಗೆ ದಾಖಲಾಗಿದ್ದಾರೆ. ಉಳಿದ 43 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ. ಅಗತ್ಯ ಇರುವ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.