ಶಿರಸಿ: ನಗರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ತಾಲ್ಲೂಕು ಮಟ್ಟದ ನೂತನ ಕಚೇರಿ ಕಟ್ಟಡ ಕಾಮಗಾರಿ ಒಂದೂವರೆ ವರ್ಷದ ಹಿಂದೆಯೇ ಮುಕ್ತಾಯಗೊಂಡಿದೆ. ಆದರೆ ಉದ್ಘಾಟನೆಗೂ ಮುನ್ನ ಇನ್ನೂ ದುರಸ್ತಿ ಕಾರ್ಯ ಆಗಬೇಕಿದೆ!
ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆಯ ಹಳೆಯ ಕಟ್ಟಡ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ 2021–22ನೇ ಸಾಲಿನಲ್ಲಿ ಹೊಸ ಕಟ್ಟಡಕ್ಕೆ ₹57 ಲಕ್ಷ ಮಂಜೂರಿಯಾಗಿ ನಿರ್ಮಾಣ ಕಾಮಗಾರಿಯು ಪ್ರಾರಂಭದಲ್ಲಿ ಕುಂಟುತ್ತ ಸಾಗಿ ಒಂದೂವರೆ ವರ್ಷದ ಹಿಂದೆ ಮುಕ್ತಾಯಗೊಂಡಿದೆ. ಈ ನಡುವೆ ಕಟ್ಟಡ ಉದ್ಘಾಟನೆ ಮಾಡಬೇಕೆಂಬ ಸಾರ್ವಜನಿಕರ ಒತ್ತಡ ಒಂದೆಡೆಯಾದರೆ, ಆಸ್ಪತ್ರೆಯ ಎದುರುಗಡೆ ಹಾಗೂ ಹಿಂಭಾಗದಲ್ಲಿ ಕ್ರಾಂಕ್ರೀಟ್ ಹಾಕುವುದು ಬಾಕಿ ಇದೆ. ಒಳ ಭಾಗದಲ್ಲಿರುವ ಟೈಲ್ಸ್ ಒಡೆದಿದ್ದು ಬದಲಿಸಬೇಕಿದೆ. ವೈರಿಂಗ್ ಮತ್ತು ಇಲೆಕ್ಟ್ರಿಕಲ್ ಕೆಲಸ ಪೂರ್ಣಗೊಂಡಿಲ್ಲ. ಬಾಗಿಲು ಅಳವಡಿಕೆ ಬಾಕಿ ಇದೆ. ಗೋಡೆಯ ಹೊರ ಭಾಗದಿಂದ ಮಳೆ ನೀರು ಒಳಗಡೆ ಬರುತ್ತಿದೆ. ಅದು ದುರಸ್ತಿಯಾಗಬೇಕಿದೆ’ ಎಂಬ ಇಲಾಖೆ ಅಧಿಕಾರಿಗಳ ಮಾತು ಇನ್ನೊಂದೆಡೆ.
‘ಬೆಂಗಳೂರು ಮೂಲದ ಹೆಬಿಟೆಟ್ ಕಂಪನಿ ಗುತ್ತಿಗೆ ಪಡೆದಿದ್ದು, ಎಂಜಿನಿಯರ್ ಮತ್ತು ಗುತ್ತಿಗೆದಾರರು ಮಂಗಳೂರಿನಲ್ಲಿರುತ್ತಾರೆ. ದುರಸ್ತಿಗೊಳಿಸಿ, ಉದ್ಘಾಟನೆಗೆ ಸಿದ್ಧಪಡಿಸಲು ಒತ್ತಡ ಹೇರಬೇಕೆಂದರೆ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ’ ಎಂಬುದು ಇಲಾಖೆ ಅಧಿಕಾರಿಗಳ ದೂರಾಗಿದೆ.
‘ತಾಲ್ಲೂಕಿನಲ್ಲಿ ಪಶುಪಾಲನೆ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಚೇರಿ ಅವಲಂಬನೆ ಹೆಚ್ಚಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಕಟ್ಟಡ ಉದ್ಘಾಟನೆಯಾಗದೇ ಜನರ ಸೇವೆಗೆ ಲಭ್ಯವಾಗುತ್ತಿಲ್ಲ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.
‘ಪಶು ಆಸ್ಪತ್ರೆಯ ಕಚೇರಿ ಕಟ್ಟಡ ನಿರ್ಮಾಣ ಹಂತದಲ್ಲಿರುವಾಗ ಗೋಡೆ ಉದುರಿ ಬಿದ್ದು ಕಳಪೆ ಗುಣಮಟ್ಟದ ಕಾಮಗಾರಿಯನ್ನು ತೆರೆದಿಟ್ಟಿತ್ತು. ನಂತರ ಶಾಸಕ ಭೀಮಣ್ಣ ನಾಯ್ಕ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ, ಗೋಡೆಯನ್ನು ತೆರವುಗೊಳಿಸಿ, ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆ ಕಂಪನಿಗೆ ಸೂಚನೆ ನೀಡಿದ್ದರು. ಆದರೂ ನಿರ್ಮಾಣ ಕಾರ್ಯ ಕುಂಟುತ್ತ ಸಾಗಿ, ಅಂತೂ ಪೂರ್ಣಗೊಂಡರೂ ಇನ್ನೂ ಕೆಲ ಅಗತ್ಯ ಕಾಮಗಾರಿಗಳು ಬಾಕಿ ಉಳಿದಿದೆ. ಮೇಲಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗ ಸೇವೆಗೆ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕಿದೆ’ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಮುಕ್ತಾಯಗೊಂಡು ಒಂದೂವರೆ ವರ್ಷ ಪೂರ್ಣ ವಿವಿಧ ಭಾಗದಲ್ಲಿ ದುರಸ್ತಿ ಬಾಕಿ
ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡರೂ ಅನೇಕ ಸಣ್ಣಪುಟ್ಟ ಕಾಮಗಾರಿ ಬಾಕಿ ಇವೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಉದ್ಘಾಟನೆಗೆ ವಿಳಂಬವಾಗುತ್ತಿದೆ. ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಡಾ.ದಿನೇಶ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ
ಹಳೆಯ ಕಟ್ಟಡದಲ್ಲೇ ಕಾರ್ಯ
‘ಪ್ರಸ್ತುತ 110 ವರ್ಷ ಹಳೆಯ ಜೀರ್ಣಗೊಂಡ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ. ಆದರೂ ಅದೇ ಕಟ್ಟಡ ಬಳಕೆ ಅನಿವಾರ್ಯವಾಗಿದೆ. ಮಳೆಗಾಲದಲ್ಲಿ ನೀರು ಒಳಗಡೆ ಸೋರುತ್ತದೆ. ವೈದ್ಯರು ಹಾಗೂ ಸಿಬ್ಬಂದಿ ಜೀವ ಭಯದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಆದಷ್ಟು ಶೀಘ್ರ ಹೊಸ ಕಟ್ಟಡ ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ತೆರೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.