ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ: ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 5:04 IST
Last Updated 15 ಆಗಸ್ಟ್ 2020, 5:04 IST
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ   

ಕಾರವಾರ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ವಿಶೇಷ ಆರ್ಥಿಕ ವಲಯವನ್ನಾಗಿ ಗುರುತಿಸಲಾಗಿದೆ. ವಿವಿಧ ಕಾಮಗಾರಿಗಳ ಮೂಲಕ ಸರ್ವಾಂಗೀಣ ಬೆಳವಣಿಗೆಗೆ ಗಮನ ಹರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟ ಅವರು, 'ರಾಜ್ಯದಲ್ಲೇ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಹೆಗ್ಗಳಿಕೆ ಉತ್ತರ ಕನ್ನಡದ್ದಾಗಿದೆ. ಮುರ್ಡೇಶ್ವರ, ಅಪ್ಸರಕೊಂಡ, ಯಾಣ, ಓಂ ಬೀಚ್, ಸಿದ್ದಾಪುರ ಕಲ್ಲಿನ ಸೇತುವೆ, ಮಾಗೋಡ, ಸಾತೊಡ್ಡಿ, ಶಿರಲೆ, ಉಂಚಳ್ಳಿ ಮುಂತಾದ ಜಲಪಾತಗಳನ್ನು ಅಭಿವೃದ್ಧಿ ಮಾಡಲಾಗುವುದು' ಎಂದು ತಿಳಿಸಿದರು.

ADVERTISEMENT

'ಜಿಲ್ಲೆಯ ವರದಾ, ಅಘನಾಶಿನಿ, ಶರಾವತಿ, ಕಾಳಿ, ಗಂಗಾವಳಿ, ಬೇಡ್ತಿ ನದಿಗಳನ್ನು ನೀರಾವರಿ ಕ್ಷೇತ್ರಕ್ಕೆ ಬಳಸಿಕೊಳ್ಳಲು ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಇದರಿಂದ ರೈತರ ಬದುಕು ಹಸನಾಗಲಿದೆ' ಎಂದರು.

'ಈ ವರ್ಷ ರಾಜ್ಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೆಳೆ ಹಾನಿಯ ಮಾಹಿತಿಯನ್ನು ಸ್ವತಃ ರೈತರೇ ಆ್ಯಪ್ ಗೆ ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ರೈತರ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ರೈತರು ಖುದ್ದು ಸಮೀಕ್ಷೆಯಲ್ಲಿ ಭಾಗವಹಿಸಬಹುದು' ಎಂದು ತಿಳಿಸಿದರು.

'ಸಾಗರಮಾಲಾ ಯೋಜನೆ ಬಗ್ಗೆ ಮೀನುಗಾರರ ಜೊತೆ ಚರ್ಚಿಸಿ ವಿವಾದಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಸಾಗರಮಾಲಾ ಯೋಜನೆಯಿಂದ ಯಾವುದೇ ಮೀನುಗಾರರಿಗೆ ಧಕ್ಕೆಯಾಗದು. ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಬಗ್ಗೆ ಪರಿಸರವಾದಿಗಳು ಅನಗತ್ಯವಾಗಿ ತೊಂದರೆ ಕೊಡುವುದರಿಂದ ಜಿಲ್ಲೆಯ ಅಭಿವೃದ್ಧಿ ಮೇಲೆ ಮಾರಕ ಪರಿಣಾಮವಾಗಲಿದೆ' ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ, ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ 'ಕೊರೊನಾ ಯೋಧ'ರನ್ನು ಸನ್ಮಾನಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.