ADVERTISEMENT

ಸರ್ಕಾರದಿಂದ ಪ್ರತಿ ಹಂತದಲ್ಲೂ ರೈತ ವಿರೋಧಿ ನಿಲುವು: ಪ್ರವೀಣ ಹೆಗಡೆ

ಕಿಸಾನ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಹೆಗಡೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:17 IST
Last Updated 27 ಸೆಪ್ಟೆಂಬರ್ 2021, 16:17 IST
ಪ್ರವೀಣ ಹೆಗಡೆ
ಪ್ರವೀಣ ಹೆಗಡೆ   

ಶಿರಸಿ: ರೈತ ವಿರೋಧಿ ಮಸೂದೆ ಜಾರಿಗೆ ಹೊರತಾಗಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ಹಂತದಲ್ಲಿಯೂ ರೈತ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಕಿಸಾನ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಹೆಗಡೆ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎರಡು ವರ್ಷದಿಂದ ಮೈಲುತುತ್ತದ ಸಹಾಯಧನ ನೀಡುತ್ತಿಲ್ಲ. ಕೊಳೆರೋಗದಿಂದ ನಷ್ಟವಾದ ಅಡಿಕೆಗೆ ಪರಿಹಾರ ಒದಗಿಸಿಲ್ಲ’ ಎಂದರು.

‘ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಳೆರೋಗಕ್ಕೆ ನಷ್ಟವಾದ ಬೆಳೆಗೆ ನೀಡಿದಂತೆ ಬಿಜೆಪಿ ಸರ್ಕಾರ ಪರಿಹಾರ ನೀಡಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಬಿಜೆಪಿಯವರು ಭಾಷಣವನ್ನಷ್ಟೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ರೈತರ ಮನೆಯ ಅಂಗಳದಲ್ಲಿ ಕಾರ್ಯಕ್ರಮ ಮಾಡಿ ರೈತಪರ ಎಂದು ಬಿಂಬಿಸಿಕೊಳ್ಳುವ ಬದಲು ರೈತರ ಬೇಡಿಕೆ ಈಡೇರಿಕೆ, ಅವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ರೈತಪರ ಕೆಲಸ ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.

‘ಆಸಾಮಿ ಖಾತೆ ಸಾಲವನ್ನು ಕೃಷಿ ಸಾಲ ಎಂದು ಪರಿವರ್ತಿಸಿಲ್ಲ. ಕೃಷಿ ಹೊಂಡ ಯೋಜನೆ, ಹಾರ್ಟಿ ಕ್ಲಿನಿಕ್, ಪಶುಭಾಗ್ಯ ಯೋಜನೆ ಸ್ಥಗಿತವಾಗಿದೆ. ಇದೆಲ್ಲವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಬಿಂಬಿಸುತ್ತಿದೆ’ ಎಂದು ದೂರಿದರು.

ದೀಪಕ ದೊಡ್ಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಬಾಲಚಂದ್ರ ಹೆಗಡೆ, ಮಾಲತಿ ಮರಾಠೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.