ಕಾರವಾರ: ಎರಡೂವರೆ ದಶಕಗಳಿಂದ ವಾರಸುದಾರರಿಲ್ಲದೆ ಇಲ್ಲಿನ ವಾಣಿಜ್ಯ ಬಂದರು ಪಕ್ಕದಲ್ಲಿ ಬಿದ್ದಿರುವ ಗ್ರಾನೈಟ್ ರಾಶಿ ಹರಾಜು ನಡೆಸಲು ಪ್ರಯತ್ನ ಸಾಗಿದೆ.
ಬಂದರು ಜಲಸಾರಿಗೆ ಮಂಡಳಿಯ ಸುಪರ್ದಿಯ ಜಾಗದಲ್ಲಿ ದಾಸ್ತಾನು ಆಗಿರುವ 2,710 ಕ್ಯುಬಿಕ್ ಮೀಟರ್ ಪ್ರಮಾಣದಲ್ಲಿರುವ 963 ಗ್ರಾನೈಟ್‍ಗಳ ಹರಾಜಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೇಂದ್ರ ಕಚೇರಿ ಒಪ್ಪಿಗೆ ಸೂಚಿಸಿದೆ. ಇ–ಹರಾಜು ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಿಂದ ಅಂತಿಮ ಅನುಮೋದನೆ ಪ್ರಕ್ರಿಯೆಯಷ್ಟು ಬಾಕಿ ಉಳಿದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್‌ನಿಂದ ವಿದೇಶಗಳಿಗೆ ರವಾನೆಯಾಗುತ್ತಿದ್ದ ಗ್ರಾನೈಟ್‍ಗಳನ್ನು ವಾಣಿಜ್ಯ ಬಂದರು ಪಕ್ಕದ ಖಾಲಿ ಜಾಗದಲ್ಲಿ ದಾಸ್ತಾನು ಮಾಡಿ, ಇಲ್ಲಿಂದ ಹಡಗುಗಳ ಮೂಲಕ ತೈವಾನ್, ಟರ್ಕಿ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರು ರಫ್ತು ಚಟುವಟಿಕೆ ಬಂದರು ಮೂಲಕ ಆರಂಭಗೊಂಡ ಬಳಿಕ ಗ್ರಾನೈಟ್ ರಫ್ತು ಚಟುವಟಿಕೆ ಕುಂಠಿತಗೊಂಡಿತ್ತು. 2010ರ ಬಳಿಕ ಸಂಪೂರ್ಣ ಸ್ಥಗಿತಗೊಂಡಿತ್ತು.
‘ವಾಣಿಜ್ಯ ಬಂದರು ಪಕ್ಕದಲ್ಲಿರುವ ಗ್ರಾನೈಟ್‌ಗಳ ವಿಲೇವಾರಿಗೆ ರಫ್ತು ಚಟುವಟಿಕೆ ನಡೆಸುತ್ತಿದ್ದ ಯಾವ ಕಂಪನಿಗಳು ಮುಂದಾಗಲಿಲ್ಲ. ಈ ಹಿಂದೆಯೂ ಅವುಗಳ ವಿಲೇವಾರಿಗೆ ಪ್ರಯತ್ನ ನಡೆಸಲಾಯಿತು. ಹಲವು ಬಾರಿ ಸಭೆ ನಡೆಸಿದ್ದರೂ, ನೋಟಿಸ್ ನೀಡಲಾಗಿದ್ದರೂ ಅವುಗಳ ಮಾಲೀಕತ್ವ ವಹಿಸಿಕೊಳ್ಳಲು ಯಾರೊಬ್ಬರೂ ಮುಂದಾಗಲಿಲ್ಲ. ಹೀಗಾಗಿ ಅವುಗಳನ್ನು ಸುಪರ್ದಿಗೆ ಪಡೆದು, ಹರಾಜು ಹಾಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿತ್ತು’ ಎಂದು ಬಂದರು ಅಧಿಕಾರಿ ರಾಜಕುಮಾರ ಹೆಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಗ್ರಾನೈಟ್‌ಗಳ ಪ್ರಮಾಣ, ಗುಣಮಟ್ಟದ ಬಗ್ಗೆ ಪರಿಶೀಲಿಸಿ ಹಲವು ತಿಂಗಳ ಹಿಂದೆಯೇ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಹರಾಜು ಪ್ರಕ್ರಿಯೆಗೆ ಒಪ್ಪಿಗೆ ಕೋರಿ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೇಂದ್ರ ಕಚೇರಿಯಿಂದ ಹರಾಜು ಪ್ರಕ್ರಿಯೆ ಕೈಗೊಳ್ಳಲು ಅನುಮತಿ ಸಿಕ್ಕಿದೆ. ಆದರೆ, ಇ–ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಅನುಮೋದನೆ ಅಗತ್ಯವಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಜಿ.ಎಸ್.ಆಶಾ ತಿಳಿಸಿದರು.
ಹರಾಜಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮ್ಮತಿ 2,710 ಕ್ಯೂಬಿಕ್ ಮೀಟರ್ ಪ್ರಮಾಣದ ಗ್ರಾನೈಟ್ ವಿದೇಶಕ್ಕೆ ರವಾನೆಯಾಗುತ್ತಿದ್ದ ಶಿಲೆಗಳು
ಬಂದರು ಪಕ್ಕದಲ್ಲಿರುವ ಗ್ರಾನೈಟ್‌ಗಳನ್ನು ಆದಷ್ಟು ಶೀಘ್ರದಲ್ಲಿ ಹರಾಜು ನಡೆಸಿ ವಿಲೇವಾರಿ ಮಾಡಲು ಪ್ರಯತ್ನ ಸಾಗಿದೆಜಿ.ಎಸ್. ಆಶಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ
ತಿರಸ್ಕೃತಗೊಂಡಿದ್ದ ದಾಸ್ತಾನು?
‘ಕಾರವಾರದ ಬಂದರು ಪಕ್ಕದಲ್ಲಿ ದಾಸ್ತಾನು ಬಿದ್ದಿರುವ ಗ್ರಾನೈಟ್‌ಗಳು ಸುಮಾರು 15 ರಿಂದ 18 ವರ್ಷಗಳಿಂದಲೂ ಹಾಗೆಯೇ ಬಿದ್ದಿವೆ. ವಿದೇಶಕ್ಕೆ ರಫ್ತು ಮಾಡುವ ಮುನ್ನ ಗುಣಮಟ್ಟ ಪರಿಶೀಲಿಸಿ ಎ ದರ್ಜೆಯ ಗ್ರಾನೈಟ್‌ಗಳನ್ನು ಮಾತ್ರವೇ ರಫ್ತು ಕಂಪನಿಗಳು ಕಳಿಸುತ್ತಿದ್ದವು. ಕಡಿಮೆ ಗಾತ್ರದ ಸೀಳು ಬಿಟ್ಟಿರುವ ಉತ್ಕೃಷ್ಟ ಗುಣಮಟ್ಟವಲ್ಲದ ಶಿಲೆಗಳನ್ನು ಇಲ್ಲಿಯೇ ಉಳಿಸಲಾಗುತ್ತಿತ್ತು. ಸದ್ಯ ಇಲ್ಲಿರುವ ದಾಸ್ತಾನಿನ ಪೈಕಿ ಹಲವು ತಿರಸ್ಕೃತಗೊಂಡಿರುವ ಶಿಲೆಗಳಾಗಿರಬಹುದು’ ಎಂದು ಬಂದರು ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.