ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ: ಮತ್ತೆ ಚಿಗುರೊಡೆದ ಆಸೆ

ರಾಜ್ಯ ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 14:52 IST
Last Updated 20 ಮಾರ್ಚ್ 2020, 14:52 IST
   

ಶಿರಸಿ: ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಬೆಸೆಯುವ ಪ್ರಸ್ತಾವಿತ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ, ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ವನ್ಯಜೀವಿ ಮಂಡಳಿ, ಶುಕ್ರವಾರ ನಡೆಸಿದ ಮಂಡಳಿಯ ಸಭೆಯಲ್ಲಿ ಪ್ರಸ್ತಾವವನ್ನು ಪುರಸ್ಕರಿಸಿದೆ. ಇದರಿಂದ ಮುದುಡಿದ್ದ ಆಸೆ ಮತ್ತೆ ಚಿಗುರೊಡೆದಂತಾಗಿದೆ.

ಈ ರೈಲ್ವೆ ಮಾರ್ಗ ನಿರ್ಮಾಣವಾದರೆ, ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದಲ್ಲಿರುವ ಅಪರೂಪದ ಸಸ್ಯಗಳು, ವನ್ಯಜೀವಿಗಳು ನಾಶವಾಗುತ್ತವೆ ಎಂಬ ಕಾರಣ ಮುಂದೊಡ್ಡಿ, ಮಾರ್ಚ್ 10ರಂದು ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ಆದರೆ, ಬಹುನಿರೀಕ್ಷಿತ ಯೋಜನೆಗೆ ಅನುಮತಿ ನಿರಾಕರಿಸಿದ್ದಕ್ಕೆ,ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಕ್ರಿಯಾಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಸಹ ಯೋಜನೆ ಪರವಾಗಿ, ರಾಜ್ಯ ಸರ್ಕಾರದೆದುರು ವಾದ ಮಂಡಿಸುವುದಾಗಿ ಭರವಸೆ ನೀಡಿದ್ದರು.

ಸಂಸದ ಅನಂತಕುಮಾರ ಹೆಗಡೆ ಅವರು, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಬಹುವರ್ಷಗಳ ಬೇಡಿಕೆಯಾಗಿರುವ ಹುಬ್ಬಳ್ಳಿ– ಅಂಕೋಲಾ ರೈಲ್ವೆ ಮಾರ್ಗವನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ವಿಶೇಷ ಆಸಕ್ತಿವಹಿಸಿ, ಮಾರ್ಗ ನಿರ್ಮಾಣ ಯೋಜನೆಗೆ ನಿರಾಕ್ಷೇಪಣಾ ಪತ್ರವನ್ನು ದೊರಕಿಸಿಕೊಡಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದರು.

ADVERTISEMENT

ಒಂದೇ ಹೆಜ್ಜೆ ಅಂತರ

‘ಜಿಲ್ಲೆಯ ಪ್ರಗತಿಪರರು, ಹಿರಿಯ ಮುತ್ಸದ್ದಿಗಳ ಬಹುವರ್ಷಗಳ ಕನಸು ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ. ಇದಕ್ಕೆ ಇದ್ದ ದೊಡ್ಡ ಅಡೆತಡೆ ನಿವಾರಣೆಯಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ವನ್ಯಜೀವಿ ಮಂಡಳಿಯು ಇದಕ್ಕೆ ಒಪ್ಪಿಗೆ ನೀಡಿ, ಕೇಂದ್ರ ವನ್ಯಜೀವಿ ಮಂಡಳಿಗೆ ಶಿಫಾರಸು ಕಳುಹಿಸಲಿದೆ. ಮಾರ್ಗ ನಿರ್ಮಾಣದ ಕನಸು ನನಸಾಗಲು ಇನ್ನು ಒಂದೇ ಹೆಜ್ಜೆ ಅಂತರ ಉಳಿದಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

‘ವನ್ಯಜೀವಿ ಮಂಡಳಿ ಕೊನೆಗೂ ವಾಸ್ತವವನ್ನು ಒಪ್ಪಿರುವುದು ಖುಷಿ ತಂದಿದೆ. ವಾಸ್ತವಿಕತೆ ಮರೆಮಾಚಿ, ಮಹತ್ವಾಕಾಂಕ್ಷಿ ಯೋಜನೆಯನ್ನು ದೂರ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಸಭೆಯಲ್ಲಿ ಸತ್ಯ ಸಂಗತಿ ಅರಿವಿಗೆ ಬಂದಿದೆ. ಭಾರತೀಯ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡಿರುವ ವರದಿ ಆಧರಿಸಿ, ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಕ್ರಿಯಾಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ ಅಭಿಪ್ರಾಯ ವ್ಯಕ್ತಪಡಿಸಿದರು.

ಏನಿದು ಯೋಜನೆ?

ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ಸಂಪರ್ಕ ಕಲ್ಪಿಸುವ 163 ಕಿ.ಮೀ ಉದ್ದದ ರೈಲ್ವೆ ಮಾರ್ಗ ಯೋಜನೆ ಇದಾಗಿದೆ. ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಅರಣ್ಯೇತರ ಪ್ರದೇಶದಲ್ಲಿ 45 ಕಿ.ಮೀ ರೈಲ್ವೆ ಹಳಿ ಮಾರ್ಗ ನಿರ್ಮಾಣವಾಗಿದೆ. ಇನ್ನುಳಿದ ಮಾರ್ಗದಲ್ಲಿ ಅರಣ್ಯ ನಾಶವಾಗುವುದೆಂದು ಪರಿಸರವಾದಿಗಳು ಆಕ್ಷೇಪಿಸುತ್ತಿರುವ ಕಾರಣ, ಯೋಜನೆಯ ಅನುಮತಿ, ಅನುಷ್ಠಾನ ನನೆಗುದಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.