ADVERTISEMENT

ವಾಣಿಜ್ಯ ಬಂದರು ನಿರ್ಮಾಣ; ಸರ್ಕಾರದ ಬೊಕ್ಕಸಕ್ಕೆ ಲಾಭ: ರೇಷ್ಮಾ ಉಲ್ಲಾಳ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:03 IST
Last Updated 24 ಜುಲೈ 2025, 3:03 IST
ಅಂಕೋಲಾ ನಗರದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಜೆ ಎಸ್ ಡಬ್ಲ್ಯೂ ಕಂಪನಿ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಬಂದರು ನಿರ್ಮಾಣದಿಂದಾಗುವ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.
ಅಂಕೋಲಾ ನಗರದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಜೆ ಎಸ್ ಡಬ್ಲ್ಯೂ ಕಂಪನಿ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಬಂದರು ನಿರ್ಮಾಣದಿಂದಾಗುವ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.   

ಅಂಕೋಲಾ: ‘ಕೇಣಿಯಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಗ್ರೀನ್ ಫೀಲ್ಡ್ ಬಂದರು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, 2022–23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಜೆಎಸ್‌ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿತ್ತು’ ಎಂದು ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇಷ್ಮಾ ಉಲ್ಲಾಳ ಮಾಹಿತಿ ನೀಡಿದರು.

ಕೇಣಿಯಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಗ್ರೀನ್ ಫೀಲ್ಡ್ ಬಂದರಿನ ಕುರಿತು ಬಂದರು ಮತ್ತು‌ ಒಳನಾಡು ಜಲಸಾರಿಗೆ ಹಾಗೂ ಜೆಎಸ್‌ಡಬ್ಲ್ಯೂ ಕಂಪನಿಯ ಆಶ್ರಯದಲ್ಲಿ ನಗರದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

‘ಮೊದಲ ಹಂತದಲ್ಲಿ ವಾರ್ಷಿಕ 30 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಲಿದ್ದು, ನಂತರದಲ್ಲಿ 92 ಮೆಟ್ರಿಕ್ ಟನ್ ರಫ್ತು ಸಾಮರ್ಥ್ಯ ಹೊಂದಲಿದೆ. ಬಂದರು ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ವರೆಗೆ 4.5 ಕಿ.ಮೀ ಉದ್ದ ರಸ್ತೆ ಮತ್ತು 6.5 ಕಿ.ಮೀ ರೈಲ್ವೆ ಸಂಪರ್ಕ ಹೊಂದಲಿದೆ’ ಎಂದು ತಿಳಿಸಿದರು.

ADVERTISEMENT

‘ರಸ್ತೆ ಸಂಪರ್ಕಕ್ಕಾಗಿ ಭಾವಿಕೇರಿ ಗ್ರಾಮದಲ್ಲಿ 25 ಮನೆ ಸಹಿತ 59 ಎಕರೆ, ಅಂಕೋಲಾ ಗ್ರಾಮದ 25 ಮನೆಗಳ ಸಹಿತ 25 ಎಕರೆ, ಶಿರಕುಳಿ ಗ್ರಾಮದ 18 ಮನೆ ಸಹಿತ 43 ಎಕರೆ, ಅಲಗೇರಿ ಗ್ರಾಮದ 7 ಮನೆ ಸಹಿತ 11 ಎಕರೆ ಒಟ್ಟು 240 ಎಕರೆ ಜಮೀನು ಭೂಸ್ವಾಧಿಗೊಳ್ಳಲಿದೆ. ಇದಲ್ಲದೆ ಸರಕು ಸಂಗ್ರಹಣೆಗಾಗಿ ಶಿರಕುಳಿಯಲ್ಲಿ 157 ಎಕರೆ, ಅಲಗೇರಿಯಲ್ಲಿ 10 ಎಕರೆ, ಬೊಗ್ರಿಬೈಲನಲ್ಲಿ 134 ಎಕರೆ, ಬಾಳೆಗುಳಿಯಲ್ಲಿ 24 ಎಕರೆ ಸೇರಿದಂತೆ ಒಟ್ಟು 324 ಎಕರೆ ಜಮೀನನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಗಣನೀಯವಾಗಿ ಹೆಚ್ಚಲಿದೆ. ಬಂದರು ಸುತ್ತಮುತ್ತ ಪ್ರದೇಶದಲ್ಲಿ ಬಂದರು ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಸರಕು ಸಾಗಾಣಿಕೆಯ ಪ್ರಮುಖ ಕೇಂದ್ರವಾಗಲಿದೆ. ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯೂ ಸಾಕಾರಗೊಳ್ಳಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿವೆ’ ಎಂದರು.

‘ಈ ಯೋಜನೆಯಲ್ಲಿ ಭೂಸ್ವಾಧೀನಕ್ಕೆ ಒಳಗಾಗುವ ಜಮೀನು ಮತ್ತು ಕಟ್ಟಡಗಳಿಗೆ ಸರ್ಕಾರದ‌ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವುದಲ್ಲದೆ, ಮೀನುಗಾರರಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲಾಗುವುದು’ ಎಂದರು.

ಯೋಜನಾ ಮುಖ್ಯಸ್ಥ ಭರಮಪ್ಪ ಕುಂಟಗೇರಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಬಸಪ್ಪ ನಾಯರ, ಜೆಎಸ್‌ಡಬ್ಲ್ಯೂ ಕಂಪನಿಯ ಆಡಳಿತಾಧಿಕಾರಿ ಸರ್ವೇಶ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.