ADVERTISEMENT

‘ಗೃಹ ಆರೋಗ್ಯ’ ಉತ್ತರ ಕನ್ನಡ ಜಿಲ್ಲೆಗೂ ವಿಸ್ತರಣೆ

ಗಣಪತಿ ಹೆಗಡೆ
Published 17 ಆಗಸ್ಟ್ 2025, 5:17 IST
Last Updated 17 ಆಗಸ್ಟ್ 2025, 5:17 IST
ಡಾ.ನೀರಜ್ ಬಿ.ವಿ
ಡಾ.ನೀರಜ್ ಬಿ.ವಿ   

ಕಾರವಾರ: ಬದಲಾಗುತ್ತಿರುವ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಸಾಂಕ್ರಾಮಿಕವಲ್ಲದ ಕೆಲ ಕಾಯಿಲೆಗಳಿಗೆ ಪ್ರಾಥಮಿಕ ಹಂತದಿಂದಲೇ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ.

ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್‌ನಿಂದ ಕೋಲಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ‘ಗೃಹ ಆರೋಗ್ಯ’ ಯೋಜನೆಯನ್ನು ಜಿಲ್ಲೆಯಲ್ಲೂ ಜಾರಿಗೆ ತರಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಕಾರ್ಯ ನಡೆದಿದೆ.

ಜಿಲ್ಲೆಯಲ್ಲಿ 14.24 ಲಕ್ಷದಷ್ಟು ಜನಸಂಖ್ಯೆ ಇದ್ದು, ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರಿಗೆ ಮಾತ್ರ ಆರೋಗ್ಯ ಸೇವೆ, ಸಲಹೆ ನೀಡಲು ಸಿದ್ಧತೆ ನಡೆದಿದೆ. 30 ವರ್ಷ ಮೇಲ್ಪಟ್ಟವರ ಸಮೀಕ್ಷೆ ನಡೆಸಿದ್ದು 9 ಲಕ್ಷದಷ್ಟು ಜನರು ಇರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

ADVERTISEMENT

‘ಯೋಜನೆಯಡಿ 16 ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಗುರುತಿಸಿ, ಚಿಕಿತ್ಸೆ ಒದಗಿಸಲು ಅವಕಾಶವಿದೆ. ಮಧುಮೇಹ, ಅಧಿಕ ರಕ್ತದೊತ್ತಡ (ಬಿ.ಪಿ), ಅಸ್ತಮಾ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಮಾನಸಿಕ ಕಾಯಿಲೆ ಸೇರಿದಂತೆ ಈ ಪಟ್ಟಿಯಲ್ಲಿರುವ ಕಾಯಿಲೆಗಳಿರುವವರಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ನಿರಂತರವಾಗಿ ಆರೋಗ್ಯ ಸಲಹೆ ನೀಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ‘ಪ್ರಜಾವಾಣಿ’ಗೆ ವಿವರಿಸಿದರು.

‘ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಪರೀಕ್ಷೆ ಮಾಡಿ ಗುರುತಿಸುತ್ತಾರೆ. ಕಾಯಿಲೆಗಳಿದ್ದರೆ ಅಂತಹವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುತ್ತಾರೆ. ಅಲ್ಲಿ ಅವರಿಗೆ ಔಷಧೋಪಚಾರ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗುತ್ತದೆ’ ಎಂದರು.

‘ಗುಡ್ಡಗಾಡು ಪ್ರದೇಶವೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆ ಪರಿಣಾಮಕಾರಿ ಜಾರಿಗೆ ಸವಾಲುಗಳು ಎದುರಾಗಬಹುದು. ಆದರೆ, 1,200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದು ಈಗಾಗಲೆ ಮನೆ ಮನೆ ಭೇಟಿ ಮೂಲಕ ಯೋಜನೆಯ ಪ್ರಾಥಮಿಕ ಸಂಗತಿಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಬಹುಪಾಲು ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿರುವ ಕಾರಣದಿಂದ ಯೋಜನೆ ಜಾರಿಗೆ ಅಷ್ಟೇನೂ ಕಷ್ಟವಾಗದು ಎಂಬ ನಿರೀಕ್ಷೆಯೂ ಇದೆ’ ಎಂದೂ ಹೇಳಿದರು.

ಗೃಹ ಆರೋಗ್ಯ ಯೋಜನೆ ಮೂಲಕ ಜನರಿಗೆ ಆರೋಗ್ಯ ತಿಳಿವಳಿಕೆ ನೀಡುವ ಜೊತೆಗೆ ಕಾಯಿಲೆ ಗಂಭೀರ ಸ್ಥಿತಿಗೆ ತಲುಪುವ ಮುನ್ನ ಚಿಕಿತ್ಸೆ ಒದಗಿಸಲು ಅನುಕೂಲವಾಗುತ್ತದೆ
ಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯಾಧಿಕಾರಿ

ಶೇ 5ರಷ್ಟು ಜನರಿಗೆ ಸಕ್ಕರೆ ಕಾಯಿಲೆ

‘ಗೃಹ ಆರೋಗ್ಯ ಯೋಜನೆ ಜಾರಿಗೆ ಮುನ್ನ ಜಿಲ್ಲೆಯಲ್ಲಿ ಆಶಾ ಇತರ ಆರೋಗ್ಯ ಕಾರ್ಯಕರ್ತರು 30 ವರ್ಷ ಮೇಲ್ಪಟ್ಟವರ ಆರೋಗ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಅವುಗಳ ಪೈಕಿ ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯ ಶೇ 5ರಷ್ಟು (ಅಂದಾಜು 72 ಸಾವಿರ) ಜನರಿಗೆ ಸಕ್ಕರೆ ಕಾಯಿಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಿದೆ’ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.