ADVERTISEMENT

‘ಚುಟುಕು’ ಸಾಹಿತ್ಯದ ಮುಕುಟ ಮಣಿ: ಸಾಹಿತಿ ಕೊಪ್ಪಲುತೋಟ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:48 IST
Last Updated 21 ಜುಲೈ 2025, 4:48 IST
ಶಿರಸಿಯಲ್ಲಿ ಭಾನುವಾರ ನಡೆದ ಚುಟಕು ಸಾಹಿತ್ಯ ಸಮ್ಮೇಳನದಲ್ಲಿ ಮುಕ್ತಕ ಕವಿ ಕೃಷ್ಣ ಪದಕಿ, ಚುಟುಕು ಕವಿ ಜಗದೀಶ ಭಂಡಾರಿ ಹಾಗೂ ಚುಟುಕು ಕವಯತ್ರಿ ಭಾರತಿ ನಲವಡೆ ಅವರಿಗೆ ‘ಚುಟುಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು 
ಶಿರಸಿಯಲ್ಲಿ ಭಾನುವಾರ ನಡೆದ ಚುಟಕು ಸಾಹಿತ್ಯ ಸಮ್ಮೇಳನದಲ್ಲಿ ಮುಕ್ತಕ ಕವಿ ಕೃಷ್ಣ ಪದಕಿ, ಚುಟುಕು ಕವಿ ಜಗದೀಶ ಭಂಡಾರಿ ಹಾಗೂ ಚುಟುಕು ಕವಯತ್ರಿ ಭಾರತಿ ನಲವಡೆ ಅವರಿಗೆ ‘ಚುಟುಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು    

ಶಿರಸಿ: ಗದ್ಯ, ಪದ್ಯ, ದಾಸ, ಶರಣ, ವಿಚಾರ, ಜನಪದ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ತನ್ನ ಶ್ರೇಷ್ಠತೆ ಮೆರೆದಿದೆ ಎಂದು ಸಾಹಿತಿ ಜಿ.ವಿ.ಭಟ್ ಕೊಪ್ಪಲುತೋಟ ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ ಬಣ್ಣದ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲಾ 5ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುಟುಕು ಚಿಕ್ಕದಾಗಿದ್ದರೂ ಅದರ ಅರ್ಥ ಹಿರಿದಾದುದಾಗಿದೆ. ಅದರಂತೆ ಚುಟುಕು ಸಾಹಿತ್ಯವು ಕೂಡ ಎಲ್ಲ ಪ್ರಕಾರಗಳ ಸಾಹಿತ್ಯದ ಮುಕುಟ ಮಣಿಯಾಗಿದೆ’ ಎಂದರು. 

ADVERTISEMENT

‘ಚುಟುಕಿನಲ್ಲಿ ಉಪದೇಶ, ಸಿದ್ಧಾಂತ, ಆದರ್ಶ, ತತ್ವಗಳು ಇವೆ. ಹೀಗೆ ಎಲ್ಲದರ ಸಂಗಮ ಚುಟುಕಿನ ಸತ್ವವಾಗಿದೆ. ಆರಂಭದಲ್ಲಿ ಹಾಸ್ಯಪ್ರಜ್ಞೆ ಮೂಡಿಸುತ್ತ, ಕ್ರಮೇಣ ಉಪದೇಶದ ಸೆಲೆ ಅಂಟಿಸಿಕೊಂಡು ತನ್ನ ಮೂಲ ನೆಲೆ  ಭದ್ರವಾಗಿಸಿದೆ. ಇಂಥ ಸಾಹಿತ್ಯ ಪ್ರಕಾರವು ಇನ್ನಷ್ಟು ಬೆಳೆಯುವ, ಜನರ ಮನದೊಳಗೆ ಇಳಿಯುವ ಅಗತ್ಯತೆಯಿದೆ’ ಎಂದು ಹೇಳಿದರು. 

ಸಮ್ಮೇಳನ ಉದ್ಘಾಟಿಸಿದ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಸಹಜವಾಗಿ ಹುಟ್ಟುವುದು ಸಾಹಿತ್ಯವಾಗಿದೆ ಎಂದರು. ಚುಟುಕು ಸಾಹಿತ್ಯ ನಿರಕ್ಷರಿಗಳು ಅಭ್ಯಸಿಸಬಹುದು. ಇಂಥ ಸಾಹಿತ್ಯವು ಸಮಾಜ ಬೆಳೆಸುವ ಕಾರ್ಯ ಮಾಡಬೇಕು. ಸಾಹಿತ್ಯವು ಜನಪರ ಹಾಗೂ ಜೀವಪರವಾಗಿರಬೇಕು. ಸಹಜತೆಯ ಜತೆ ಜ್ಞಾನಕ್ಕೆ ಹೊಳಪು ನೀಡುವಂತಿರಬೇಕು. ಚುಟುಕು ಸಾಹಿತ್ಯವು ಎಲ್ಲರ ಮನಸು ಅರಳಿಸಬೇಕು ಎಂದ ಅವರು, ಅತಿ ವಿದ್ಯೆಯು ಅನಾಗರಿಕ ವರ್ತನೆಗೆ ಕಾರಣವಾಗುತ್ತಿದೆ. ಹಾಗಾಗಿ ಶಿಕ್ಷಣದಲ್ಲಿ ಸಾಹಿತ್ಯದ ಮೂಲಕ ನೀತಿ ತುಂಬುವ ಕಾರ್ಯ ಆಗಬೇಕು’ ಎಂದು ಹೇಳಿದರು. 

ಸಮ್ಮೇಳನದ ಅಂಗವಾಗಿ ಮುಕ್ತಕ ಕವಿ ಕೃಷ್ಣ ಪದಕಿ, ಚುಟುಕು ಕವಿ ಜಗದೀಶ ಭಂಡಾರಿ ಹಾಗೂ ಚುಟುಕು ಕವಯತ್ರಿ ಭಾರತಿ ನಲವಡೆ ಅವರಿಗೆ ‘ಚುಟುಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪರಿಷತ್ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. 

ಪರಿಷತ್ ರಾಜ್ಯ ಸಲಹಾ ಸಮಿತಿ ಸದಸ್ಯ ಜಿ.ಎ.ಹೆಗಡೆ ಸೋಂದಾ, ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಂಜುನಾಥ ಹೆಗಡೆ ಹೂಡ್ಲಮನೆ, ಪದಾಧಿಕಾರಿ ದೀಪಾಲಿ ಸಾಮಂತ ದಾಂಡೇಲಿ, ಗುರು ಸಿದ್ದೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೀರಮ್ಮ ಹಿರೇಮಠ, ಲಯನ್ಸ್ ಕ್ಲಬ್ ಶಿರಸಿ ಘಟಕದ ಅಧ್ಯಕ್ಷ ಗುರುರಾಜ ಹೊನ್ನಾವರ, ಪ್ರಮುಖರಾದ ಗಂಗಯ್ಯ ಕುಲಕರ್ಣಿ ಇದ್ದರು. 

ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ ಮಲ್ಮನೆ ಸ್ವಾಗತಿಸಿದರು. ಭವ್ಯ ಹಳೆಯೂರು ನಿರೂಪಿಸಿದರು. ರೋಹಿಣಿ ಹೆಗಡೆ ವಂದಿಸಿದರು. 

ಚುಟುಕು ಸಾಹಿತ್ಯ ಪರಿಷತ್‍ನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಮ್ಮೇಳನ ಗೋಷ್ಠಿಯಂಥ ಚಟುವಟಿಕೆ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ
ಕೃಷ್ಣಮೂರ್ತಿ ಕುಲಕರ್ಣಿ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ

ಸಮ್ಮೇಳನದ ಹಕ್ಕೊತ್ತಾಯಗಳು:

  • ಶಿಶು ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕು

  • ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು

  • ಶಿರಸಿಯಲ್ಲಿ ಸಾಹಿತ್ಯ ಭವನ ನಿರ್ಮಿಸಬೇಕು.

  • ಶಿಕ್ಷಣ ಪದ್ದತಿಯಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಬಳಸಿಕೊಳ್ಳಬೇಕು

  • ಸಾಹಿತ್ಯ ಸಾಧನೆ ಮಾಡಿದ ವಯೋವೃದ್ಧರಿಗೆ ಮಾಶಾಸನ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.