ADVERTISEMENT

ಹಳಿಯಾಳ: ತೆರೆಯದ ಗೋವಿನ ಜೋಳ ಖರೀದಿ ಕೇಂದ್ರ; ಕನಿಷ್ಠ ದರಕ್ಕೆ ಮಾರಾಟ

ಅಕಾಲಿಕ ಮಳೆಯಿಂದ ಫಸಲು ನಷ್ಟದ ಭೀತಿ ಎದುರಿಸುತ್ತಿರುವ ಗೋವಿನ ಜೋಳ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:21 IST
Last Updated 4 ನವೆಂಬರ್ 2025, 7:21 IST
ಹಳಿಯಾಳದ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದಿದ್ದ  ಗೋವಿನ ಜೋಳವನ್ನು ರಾಯಪಟ್ಟಣ ಗ್ರಾಮದ ಸೋನು ಬಾಬು ಗಾವಡೆ ಹಾಗೂ ನಾಗು ಬಾಯಿ ದೊಂಡು ಗಾವಡೆ ಹಾಗೂ ಠಕ್ಕುಬಾಯಿ ಲಾಂಬೋರೆ   ಒಣಗಿಸಿದರು
ಹಳಿಯಾಳದ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದಿದ್ದ  ಗೋವಿನ ಜೋಳವನ್ನು ರಾಯಪಟ್ಟಣ ಗ್ರಾಮದ ಸೋನು ಬಾಬು ಗಾವಡೆ ಹಾಗೂ ನಾಗು ಬಾಯಿ ದೊಂಡು ಗಾವಡೆ ಹಾಗೂ ಠಕ್ಕುಬಾಯಿ ಲಾಂಬೋರೆ   ಒಣಗಿಸಿದರು   

ಹಳಿಯಾಳ: ತಾಲ್ಲೂಕಿನಲ್ಲಿ ಗೋವಿನ ಜೋಳ ಉತ್ತಮವಾಗಿ ಬೆಳೆದಿದ್ದು ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರ ಆರಂಭಗೊಳ್ಳದ ಕಾರಣ ಗೋವಿನ ಜೋಳ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ರೈತರಿಗೆ ಎದುರಾಗಿದೆ.

ಹಳಿಯಾಳ, ದಾಂಡೇಲಿ ತಾಲ್ಲೂಕಿನಲ್ಲಿ ಸುಮಾರು 3,810 ಹೆಕ್ಟೇರ್ ಜಮೀನಿನಲ್ಲಿ ಗೋವಿನ ಜೋಳ ಬೆಳೆಯಲಾಗಿದ್ದು, 1.52 ಲಕ್ಷ ಕ್ವಿಂಟಲ್‍ನಷ್ಟು ಗೋವಿನ ಜೋಳದ ಫಸಲು ಸಿಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರಿನ ಸಮಯದಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಉತ್ತಮ ಫಸಲು ಕೈಸೇರಿದೆ.

ಫಸಲು ಕಟಾವಿನ ವೇಳೆಯಲ್ಲೇ ನಿರಂತರ ಮಳೆಯಾಗಿದ್ದರಿಂದ ಜೋಳದ ಬೆಳೆ ಮಳೆಯಲ್ಲಿ ನೆನೆದು ಕೆಲ ಮಟ್ಟಿಗೆ ಹಾನಿಯಾಯಿತು. ಹಲವಾರು ಬೆಳೆಗಾರರು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಪ್ರಾಂಗಣದಲ್ಲಿ ಗೋವಿನ ಜೋಳ ಮಾರಾಟಕ್ಕೆ ತಂದು ಒಣಗಿಸಲು ಹಾಕಿದ್ದಾರೆ. ಗ್ರಾಮೀಣ ಭಾಗದ ಗದ್ದೆಗೆ ಹೊಂದಿಕೊಂಡಿರುವ ರಸ್ತೆಯ ಮೇಲೆ  ಗೋವಿನ ಜೋಳವನ್ನು ಒಣಗಿಸಿರುವುದು ಕಾಣಸಿಗುತ್ತಿದೆ.

ADVERTISEMENT

‘ಸರ್ಕಾರ ಪ್ರತಿ ಕ್ವಿಂಟಲ್ ಜೋಳಕ್ಕೆ ₹2,400 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಈ ದರದಲ್ಲಿ ಜೋಳ ಖರೀದಿಸಬೇಕಾದ ಖರೀದಿ ಕೇಂದ್ರ ಇನ್ನೂ ಆರಂಭಗೊಂಡಿಲ್ಲ. ಫಸಲು ಕಟಾವು ಮಾಡಿದ ಬೆನ್ನಲ್ಲೇ ಮಳೆಯೂ ಸುರಿದಿದ್ದರಿಂದ ಫಸಲು ಮಳೆ ನೀರಿಗೆ ಸಿಲುಕಿ ಮುಗ್ಗುತ್ತಿವೆ. ಹಳಿಯಾಳ ಮಾರುಕಟ್ಟೆಗೆ ಧಾರವಾಡ, ಕಲಘಟಗಿ, ಅಳ್ನಾವರ ಭಾಗದಿಂದಲೂ ಖರೀದಿದಾರರು ಬಂದಿದ್ದು ಖರೀದಿ ಮಾಡುವಾಗ ಕಾರ್ಖಾನೆಗೆ ಸಾಗಿಸುವಂತಹ ಗೋವಿನ ಜೋಳದ ಗುಣಮಟ್ಟ ಪರಿಶೀಲಿಸಿ ಮುಗ್ಗದಿ ಜೋಳಕ್ಕೆ ಶೇ 20 ರಷ್ಟು ಕಡಿಮೆ ದರ ನಿಗದಿಪಡಿಸುತ್ತಿದ್ದಾರೆ’ ಎಂದು ರೈತರು ಸಮಸ್ಯೆ ಹೇಳಿಕೊಂಡರು.

‘15 ದಿನಗಳಿಂದ ಎಪಿಎಂಸಿ ಮಾರುಕಟ್ಟೆಗೆ ಜೋಳ ಮಾರಾಟಕ್ಕೆ ತರುತ್ತಿದ್ದೇನೆ. ಆಗಾಗ ಮಳೆಯೂ ಸುರಿಯುತ್ತಿದೆ. ಬಹುಪಾಲು ಫಸಲನ್ನು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಿದ್ದೇನೆ’ ಎಂದು ಡೊಮಗೇರಾ ಗ್ರಾಮದ ಬಾಬು ಕಾಂಬ್ರೆಕರ ಹೇಳಿದರು.

‘30 ರಿಂದ 35 ಕ್ವಿಂಟಲ್‌ನಷ್ಟು ಗೋವಿನ ಜೋಳ ಉತ್ತಮವಾಗಿ ಬಂದಿದೆ. ಜೋಳಕ್ಕೆ ಉತ್ತಮ ಬೆಲೆ ನಿರೀಕ್ಷೆಯಲ್ಲೇ ಕಳೆದ ಒಂಬತ್ತು ದಿನಗಳಿಂದ ಪ್ರತಿದಿನ ಜೋಳವನ್ನು ಎಪಿಎಂಸಿ ಪ್ರಾಂಗಣದಲ್ಲಿ ಒಣಗಿಸಿ ಮತ್ತೆ ತುಂಬುತ್ತಿದ್ದೇನೆ’ ಎಂದು ರಾಯಪಟ್ಟಣ ಗ್ರಾಮದ ವಿಠ್ಠಲ ಲಾಂಬೋರೆ ಹೇಳಿದರು.

ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ
ಎಸ್.ಎಸ್.ಹಾವಣ್ಣವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ

ಮಾರುಕಟ್ಟೆಯಲ್ಲಿ ದರ ಕುಸಿತ

ಕಳೆದ ವರ್ಷ ಹಳಿಯಾಳದ ಎಪಿಎಂಸಿ ಪ್ರಾಂಗಣದಲ್ಲಿ ಸುಮಾರು 190639 ಕ್ವಿಂಟಲ್ ಆವಕವಾಗಿ ಗರಿಷ್ಠ ₹2650 ದರಕ್ಕೆ ಜೋಳ ಮಾರಾಟವಾಗಿದ್ದವು. ಸರಾಸರಿ ₹2375 ದರ ಇತ್ತು. ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ಅಂತ್ಯದವರೆಗೆ ಎಪಿಎಂಸಿ ಪ್ರಾಂಗಣದಲ್ಲಿ 46899 ಕ್ವಿಂಟಲ್ ಗೋವಿನ ಜೋಳ ಮಾರಾಟವಾಗಿದೆ. ಗರಿಷ್ಠ ₹2150 ದರ ಸಿಕ್ಕಿದ್ದು ಸರಾಸರಿ ದರವು ₹1900ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.