ADVERTISEMENT

ಶಿರಸಿ | ಹವ್ಯಕರು ರಾಜಕೀಯವಾಗಿ ಬಲಗೊಳ್ಳಿ: ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:26 IST
Last Updated 29 ಡಿಸೆಂಬರ್ 2025, 7:26 IST
ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ ಮತ್ತು ಹವ್ಯಕ ವೈದಿಕ ಸಂಘಟನೆ ಸಹಯೋಗದಲ್ಲಿ ನಡೆದ ಸಂಸ್ಕಾರೋತ್ಸವವನ್ನು ಶಿವರಾಮ ಹೆಬ್ಬಾರ ಉದ್ಘಾಟಿಸಿದರು
ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ ಮತ್ತು ಹವ್ಯಕ ವೈದಿಕ ಸಂಘಟನೆ ಸಹಯೋಗದಲ್ಲಿ ನಡೆದ ಸಂಸ್ಕಾರೋತ್ಸವವನ್ನು ಶಿವರಾಮ ಹೆಬ್ಬಾರ ಉದ್ಘಾಟಿಸಿದರು   

ಶಿರಸಿ: ‘ಜಾತಿಯ ಹೊರತಾದ ಸಮಾಜವಿಲ್ಲ ಎಂಬ ಸ್ಥಿತಿ ವಿಧಾನಸಭೆಯಿಂದ ಹಿಡಿದು ಸಮಾಜದ ಪ್ರತಿ ಕ್ಷೇತ್ರದಲ್ಲಿ ಮೂಡಿದೆ. ಆದರೆ ಹವ್ಯಕರು ಎಂದೂ ಜಾತಿಯನ್ನು ಮುನ್ನೆಲೆಗೆ ತಂದು ತಮ್ಮನ್ನು ಗುರುತಿಸಿಕೊಂಡಿಲ್ಲ. ಆದರೆ ರಾಜಕೀಯವಾಗಿ ಬಲಾಢ್ಯವಾಗಬೇಕು. ಅದರತ್ತ ಸಂಘಟಿತ ಸಮಾಜ ಚಿಂತಿಸುವ ಅಗತ್ಯವಿದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ ಮತ್ತು ಹವ್ಯಕ ವೈದಿಕ ಸಂಘಟನೆ ಸಹಯೋಗದಲ್ಲಿ ಭಾನುವಾರ ನಡೆದ ಸಂಸ್ಕಾರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದ ಎಲ್ಲೆಡೆ ತನ್ನ ಸ್ವಂತ ಸಾಮರ್ಥ್ಯದ ಮೇಲೆ ಪ್ರತಿಭಾವಂತ ಸಮಾಜ ಕಟ್ಟಿರುವ ಸಮುದಾಯ ಹವ್ಯಕ ಸಮುದಾಯವಾಗಿದೆ. ಇಂಥ ಸಮುದಾಯ ತಳದಿಂದ ಗಟ್ಟಿಯಾಗಲು ಹಲವರ ಕೊಡುಗೆಯಿದೆ’ ಎಂದರು. 

ADVERTISEMENT

‘ಎಲ್ಲರೂ ಜಾತಿ ಹೇಳಲು ಗೌರವ ಪಟ್ಟರೆ ಹವ್ಯಕರು ಸ್ವಲ್ಪ ಭಯಪಡುತ್ತಾರೆ. ಸಮಾಜಕ್ಕೆ ಯಾವುದೇ ಘಾಸಿ ಮಾಡದ, ತಪ್ಪು ಮಾಡದ ಸಮುದಾಯ ಹವ್ಯಕ ಸಮುದಾಯವಾಗಿದೆ, ವ್ಯಕ್ತಿಯ ಬದುಕಿನಲ್ಲಿ ಮಾತ್ರ ಸಂಸ್ಕಾರ ಇದ್ದರೆ ಸಾಲದು, ನಡೆ, ನುಡಿ, ಪ್ರತಿ ಚಟುವಟಿಕೆಯಲ್ಲಿ ಅದು ಪ್ರತಿಫಲಿಸಬೇಕು. ರಾಷ್ಟ್ರೀಯತೆ, ದೇಶಭಕ್ತಿಯ ಜತೆ ನಾವು ಹುಟ್ಟಿದ ಜಾತಿ, ಸಮುದಾಯದ ಬಗೆಗೂ ಹೆಮ್ಮೆ ಇರಬೇಕು’ ಎಂದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ‘ಸ್ಥಾನಿಕವಾಗಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಯುವ ಸಮೂಹ ಸ್ಥಳೀಯವಾಗಿ ಉಳಿಯಲು ಸಾಧ್ಯ. ಸಂಘ–ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಹವ್ಯಕ ಸಮುದಾಯದ ಉಳಿವು ಸಾಧ್ಯ. ಹವ್ಯಕರಲ್ಲಿ ಇಂದು ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಇದರಿಂದ ಸಮುದಾಯಕ್ಕೆ ತೊಂದರೆಯಾಗುತ್ತಿದೆ. ರಾಜಕೀಯವಾಗಿ ಸಂಘಟಿತವಾಗುವ ಅಗತ್ಯವಿದೆ’ ಎಂದು ಹೇಳಿದರು. 

ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರ, ಆರ್.ಎಂ.ಹೆಗಡೆ ಬಾಳೇಸರ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಹವ್ಯಕ ಶಿಕ್ಷಕ ವೇದಿಕೆ ಸಂಚಾಲಕ ಡಿ.ಪಿ.ಹೆಗಡೆ, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ, ಸಮಾವೇಶದ ಸಂಚಾಲಕ ವಿ.ರಾಮಚಂದ್ರ ಭಟ್ ಇತರರಿದ್ದರು. ಕಾರ್ಯಕ್ರಮದ ಭಾಗವಾಗಿ ವಿವಿಧ ವಿಷಯಗಳ ಕುರಿತು ಚಿಂತನಾ ಗೋಷ್ಠಿ ನಡೆಯಿತು. 

ಆಚಾರ ವಿಚಾರ ನಡತೆಗಳಲ್ಲಿ ಒಳ್ಳೆಯ ಗುಣ ವೃದ್ಧಿಸಿಕೊಳ್ಳುವುದು ಸಂಸ್ಕಾರವಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ
ಶ್ರೀಧರ ಭಟ್ ಕೆಕ್ಕಾರ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.