ಹೊನ್ನಾವರ: ತಾಲ್ಲೂಕಿನಲ್ಲಿ ಮಳೆ ಗುರುವಾರ ಇನ್ನಷ್ಟು ಬಿರುಸಾಗಿದ್ದು, ಜೋರು ಮಳೆಯಿಂದ ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಯಿತು.
ನಿರಂತರ ಮಳೆಯಿಂದಾಗಿ ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಗುಂಡಬಾಳಾ, ಬಡಗಣಿ ಮೊದಲಾದ ನದಿಗಳು ಮೈದುಂಬಿ ಹರಿಯುತ್ತಿವೆ. ಮಳೆಯ ತೀವ್ರತೆಗೆ ಅಲ್ಲಲ್ಲಿ ಹಾನಿ ಕೂಡ ಸಂಭವಿಸಿದ್ದು ವಿದ್ಯುತ್ ವ್ಯತ್ಯಯ ಕೂಡ ಮುಂದುವರಿದಿದೆ.
ರಾಷ್ಟ್ರೀಯ ಹೆದ್ದಾರಿ 69ರ ಪಕ್ಕದ ವರ್ನಕೇರಿ, ಮುಗ್ವಾ ಹುಲಿಯಪ್ಪನಕಟ್ಟೆ ಮೊದಲಾದೆಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಮಳೆ ಪ್ರಮಾಣ ಹೆಚ್ಚಾದರೆ ಕುಸಿತ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.
‘ಹೊಸಾಕುಳಿ ಗ್ರಾಮದ ಮಡಿವಾಳಕೇರಿ ಮಜರೆಯ ಮಂಜುನಾಥ ಮಡಿವಾಳ ಮತ್ತು ರಾಧ ನಾಯ್ಕ, ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಮನೆಕೇರಿ ಮಜರೆಯ ನೀಲ ರವಿ ನಾಯ್ಕ ಅವರ ಮನೆಗಳ ಸಮೀಪದ ಧರೆ ಕುಸಿದಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.