ಭಟ್ಕಳ: ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಯ ಮುನ್ಸೂಚನೆ ಅರಿಯದೇ ಮನೆಯಿಂದ ಕೆಲಸಕ್ಕಾಗಿ ಹೊರಗೆ ಬಂದ ಜನರು ಮಳೆಯಲ್ಲಿಯೇ ಗಂಟೆಗಟ್ಟಲೆ ನೆನೆದು ನಿಲ್ಲುವ ಸನ್ನಿವೇಶ ಎದುರಾಯಿತು.
ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಸರಿಯಾಗಿ ಮುಚ್ಚಿರದ ಕಾರಣ ಮೊದಲ ಮಳೆಗೆ ರಸ್ತೆಗಳು ಕೆಸರುಗದ್ದೆಯಾಗಿತ್ತು. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಯಿತು.
ಪಟ್ಟಣದ ಆಸರಕೇರಿಯ ಬೈಲಕೇರಿ ರಸ್ತೆಯು ಸಂಪೂರ್ಣ ಕೊಚ್ಚಿ ಹೋಗಿದ್ದು, ಸಾರ್ವಜನಿಕರು ತಿರುಗಾಡದಂತಾಗಿದೆ. ಸಮರ್ಪಕ ಹೂಳೆತ್ತದ ಕಾರಣ ಪ್ರತಿವರ್ಷದಂತೆ ಈ ವರ್ಷವೂ ಪಟ್ಟಣದ ಮುಖ್ಯ ರಸ್ತೆ ಹಾಗೂ ಶಂಸುದ್ದೀನ್ ಸರ್ಕಲ್ ಸಂಪೂರ್ಣ ಜಲಾವೃತ್ತಗೊಂಡಿತ್ತು.
ಮಳೆ ಆರ್ಭಟ ಮುಂದುವರಿದಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಮುಂಜಾಗ್ರತ ಕ್ರಮವಾಗಿ ತಗ್ಗು ಪ್ರದೇಶಗಳ ಜನರಿಗೆ ಎಚ್ಚರದಿಂದ ಇರುವಂತೆ, ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.