ADVERTISEMENT

ಶಿರಸಿ : ಹೆಸ್ಕಾಂಗೆ ತಲೆನೋವಾದ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 5:17 IST
Last Updated 4 ಜುಲೈ 2023, 5:17 IST
ಹೆಸ್ಕಾಂ
ಹೆಸ್ಕಾಂ    

ರಾಜೇಂದ್ರ ಹೆಗಡೆ

ಶಿರಸಿ: ಮಳೆ ಆರಂಭದೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯು ಹೆಸ್ಕಾಂಗೆ ತಲೆನೋವಾಗಿ ಮಾರ್ಪಟ್ಟಿದೆ. ಕೈಕೊಡುವ ವಿವಿಧ ವಿದ್ಯುತ್ ಪರಿಕರಗಳನ್ನು ನಿಗದಿತ ಸಮಯದೊಳಗೆ ನಿರ್ವಹಿಸಲು ಬೇಕಾದ ಸಿಬ್ಬಂದಿ ಕೊರತೆ ಇದಕ್ಕೆ ಕಾರಣವಾಗಿದೆ.

ಉತ್ತರ ಕನ್ನಡವು ಹೆಸ್ಕಾಂ ವ್ಯಾಪ್ತಿಯಲ್ಲಿ ಮೂರನೇ ಅತಿ ದೊಡ್ಡ ಜಿಲ್ಲೆಯಾಗಿದೆ. ಹಾಲಿ 39 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 157 ಗ್ರಾಮೀಣ 11 ಕೆವಿ ಫೀಡರ್ ಗಳ ಮೂಲಕ ವಿದ್ಯುತ್ ಪೂರೈಕೆ ಆಗುತ್ತಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ದಟ್ಟ ಕಾಡುಗಳ ನಡುವೆ ಇರುವ ಹಳ್ಳಿಗಳಿಗೂ ಈಚಿನ ವರ್ಷದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ.

ADVERTISEMENT

ಗಾಳಿಮಳೆಗೆ ಮರಗಳು ಧರೆಗುರುಳಿದಾಗ ಜೊತೆಗೆ ವಿದ್ಯುತ್ ಕಂಬ, ತಂತಿಯನ್ನೂ ನೆಲಕ್ಕೆ ಕೆಡವುತ್ತದೆ. ಇವುಗಳನ್ನು ಕಾಲಮಿತಿಯೊಳಗೆ ದುರಸ್ತಿ ಮಾಡಲು  ಹೆಸ್ಕಾಂನಲ್ಲಿ ನಿಗದಿತ ಪ್ರಮಾಣದ ನಿರ್ವಹಣಾ ಸಿಬ್ಬಂದಿ ಇಲ್ಲ. ವರ್ಷಗಳಿಂದ ಸಿಬ್ಬಂದಿ ಭರ್ತಿಯಾಗದ ಕಾರಣ ಸಮಸ್ಯೆ ವರ್ಷದಿಂದ ವರ್ಷಕ್ಕೆ ಉಲ್ಬಣಿಸಲು ಕಾರಣವಾಗಿದೆ. 

ಹೆಸ್ಕಾಂ ಜಿಲ್ಲಾ ವ್ಯಾಪ್ತಿಯಲ್ಲಿ  ನಿರ್ವಹಣಾ ಸಿಬ್ಬಂದಿ 470, ಮೀಟರ್ ರೀಡರ್ಸ್ 42 ಹುದ್ದೆಗಳು ಖಾಲಿಯಿದೆ. ಇದರಿಂದ ಎಲ್ಲಿಯಾದರೂ ಕಂಬ ಮುರಿದರೆ, ತಂತಿಗಳ ಮೇಲೆ ಮರದ ಟೊಂಗೆಗಳು ಬಿದ್ದರೆ ಅವುಗಳ ತೆರವಿಗೆ ಎರಡು ಮೂರು ದಿನ ಹಿಡಿಯುತ್ತಿದೆ. ಇದರಿಂದಾಗಿ ಸಮರ್ಪಕ ವಿದ್ಯುತ್ ಪೂರೈಕೆ ಆಗದೆ ಸಮಸ್ಯೆಗೆ ಕಾರಣ ಆಗುತ್ತಿದೆ.

ಇರುವ ಮೀಟರ್ ರೀಡರ್‌ಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿರುವ ಕಾರಣ ಬಿಲ್ ತಲುಪಿಸಲು ವಿಳಂಬ ಆಗುತ್ತಿದೆ. 2014ರಿಂದ 2022ರವರೆಗೆ 403 ನಿರ್ವಹಣಾ ಸಿಬ್ಬಂದಿಗೆ ನೇಮಕಾತಿ ನೀಡಲಾಗಿತ್ತಾದರೂ ಅದರಲ್ಲಿ ಶೇ 80ರಷ್ಟು ಸಿಬ್ಬಂದಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದಾರೆ. ಈಗಲೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಕೆಯಾಗುತ್ತಿದೆ. ಇದು ಹೆಸ್ಕಾಂ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗುತ್ತಿದೆ ಎಂಬುದು ಹೆಸ್ಕಾಂ ಮೂಲದ ಮಾಹಿತಿಯಾಗಿದೆ. 

ಉಳಿದಂತೆ ಹೆಸ್ಕಾಂ ವಿವಿಧ ಕಚೇರಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ 2, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 10, ಸಹಾಯಕ ಎಂಜಿನಿಯರ್‌ 25, ಕಿರಿಯ ಎಂಜಿನಿಯರ್ 10 ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗಿಲ್ಲ. ಇರುವ ಎಂಜಿನಿಯರ್ ಗಳಿಗೆ ಎರಡು ಮೂರು ಪಟ್ಟು ಹೆಚ್ಚಿನ ಜವಾಬ್ದಾರಿ ಹೊರಿಸಲಾಗಿದ್ದು, ಎಲ್ಲ ಕಡೆ ಸಮರ್ಥವಾಗಿ ನಿಭಾಯಿಸಲು ಹರಸಾಹಸ ಪಡುವಂತಾಗಿದೆ ಎಂಬುದು ಹೆಸ್ಕಾಂ ಅಧಿಕಾರಿಯೊಬ್ಬರ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.