ADVERTISEMENT

ಉತ್ತರ ಕನ್ನಡ | ನೂತನ ವಕ್ಫ್ ಸಮಿತಿಗೆ ಹೈಕೋರ್ಟ್ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST

ಶಿರಸಿ: ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ ಒಂದೂವರೆ ವರ್ಷ ಬಾಕಿ ಇರುವಾಗಲೇ, ರಾಜಕೀಯ ಒತ್ತಡದಿಂದ ಕಾನೂನು ಬಾಹಿರವಾಗಿ ನೂತನ ಸಮಿತಿ ರಚಿಸಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಹಿಂದಿನ ಸಮಿತಿ ಮುಂದುವರಿಯಲಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಪ್ರಮುಖ ಮಹಮ್ಮದ್ ಖಯಾಮ್ ಮುಗದ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಲಿ ಇರುವ ವಕ್ಫ್ ಸಲಹಾ ಮಂಡಳಿ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷವಾಗಿದೆ. ಅವಧಿ ಮುಗಿಯುವ ಮುನ್ನವೇ ರಾಜ್ಯ ಮಂಡಳಿಯ ಆಡಳಿತಾಧಿಕಾರಿ ಮೇಲೆ ಒತ್ತಡ ತಂದು ‌ನೂತನ ಸಮಿತಿ ರಚಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು’ ಎಂದರು.

ವಕ್ಫ್ ಮಂಡಳಿಯ ನೂತನ ಅಧ್ಯಕ್ಷರ ಆಯ್ಕೆಗೆ ಕಳೆದ ಜನವರಿ 22ರಂದು ಚುನಾವಣೆ ನಿಗದಿಯಾಗಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಜನವರಿ 21ರಂದೇ ರಾತ್ರಿ ರಾಜ್ಯದ 23 ಮಂಡಳಿಗಳಿಗೆ ಹಾಲಿ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರನ್ನು ನೇಮಕ ಮಾಡಿ ರಾಜ್ಯದ ಆಡಳಿತಾಧಿಕಾರಿ ಹೊರಡಿಸಿದ್ದರು. ಈ ಆದೇಶವನ್ನು ತಡೆ ಹಿಡಿದು ಹಾಲಿ ಅಧ್ಯಕ್ಷರನ್ನೇ ಮುಂದುವರಿಸಲು ರಾಜ್ಯ ವಕ್ಫ್ ಮಂಡಳಿ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು. ವಕ್ಫ್ ಮಂಡಳಿ ಪ್ರಮುಖರಾದ ಮಹಮ್ಮದ್ ಇಕ್ಬಾಲ್ ಬಿಳಗಿ, ನವಾಜ್ ಅಹಮ್ಮದ್ ಅಬ್ದುಲ್, ಮಕ್ಬುಲ್ ಅಹಮ್ಮದ್, ಎಫ್.ಡಿ.ಶೇಖ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.