
ಮುಂಡಗೋಡ: ‘ಜ್ಞಾನದಿಂದ ಪ್ರಪಂಚ ಆಳಲು ಹೊರಟಿದ್ದು, ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿರುವ ಈ ನೆಲವು, ದಾಸರ ಪುಣ್ಯಭೂಮಿಯಾಗಿದೆ. ಭಾರತ ಹಿಂದೂ ರಾಷ್ಟ್ರವಾಗಿದ್ದರಿಂದ, ಹಲವು ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ’ ಎಂದು ಪುಣ್ಯಕ್ಷೇತ್ರ ಸಂರಕ್ಷಣ ಸಮಿತಿಯ ಸಂಚಾಲಕ ವಸಂತ ಗಿಳಿಯಾರ ಹೇಳಿದರು.
ಇಲ್ಲಿನ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಅಧಿಕಾರದ ಪಟ್ಟ ನೀಡಿದ್ದು ಹಿಂದೂ ಸಮಾಜ’ ಎಂದರು.
‘ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ನಮ್ಮ ಮನೆಗಳಲ್ಲಿ ಹಿಂದುತ್ವದ ಜಾಗೃತಿ ಆಗದಿದ್ದರೆ ಮತ್ತೊಬ್ಬರು ಬಂದು ಸೇರಲು ಅವಕಾಶ ನೀಡಿದಂತಾಗುತ್ತದೆ. ಇಂತಹ ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಪಾಲ್ಗೊಳ್ಳಬೇಕು’ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿರಸಿ ವಿಭಾಗ ಸಂಪರ್ಕ ಪ್ರಮುಖ ಶ್ರೀಧರ ಹಿರೇಹದ್ದ ಮಾತನಾಡಿ, ‘ನಮ್ಮ ಚಿಂತಕರು ನೂರು ವರ್ಷಗಳ ಹಿಂದೆಯೇ, ಹಿಂದೂಗಳಲ್ಲಿ ಏಕತೆ ಮೂಡಿಸುವ ಉದ್ದೇಶದಿಂದ ಸಂಘವನ್ನು ಪ್ರಾರಂಭಿಸಿದರು. ಜಗತ್ತಿನೆಲ್ಲೆಡೆ ಸಂಘದ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವ್ಯಕ್ತಿಗೆ ಸಂಸ್ಕಾರವನ್ನು ಕಲಿಸುತ್ತದೆ. ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಕೆಲಸ ಎಲ್ಲೆಡೆ ಆಗಬೇಕು. ಸ್ವದೇಶಿ ಉಡುಗೆ ಹಾಗೂ ವಸ್ತುಗಳನ್ನು ಬಳಸಬೇಕು’ ಎಂದರು.
ವೇದಮೂರ್ತಿ ರುದ್ರಮನಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಧರ ಹೆಗಡೆ, ಸುರೇಖಾ ಗಾಯತೊಂಡೆ, ಸಮ್ಮೇಳನದ ಸಂಚಾಲನಾ ಸಮಿತಿ ಅಧ್ಯಕ್ಷ ತಂಗಮ್ ಚಿನ್ನನ್, ಸುರೇಶ ಕಲ್ಲೋಳ್ಳಿ, ಪ್ರಕಾಶ ಬಡಿಗೇರ, ಶಂಕರ ಲಮಾಣಿ, ಮಂಜುನಾಥ ಎಚ್.ಪಿ., ಮಂಜುನಾಥ ಹಿರೇಮಠ, ಹರೀಶ ಪೂಜಾರಿ ಇದ್ದರು.