ADVERTISEMENT

‘ಹಿಂದೂ ಸಂತತಿ ಇಳಿಕೆ ಬೇಡ’: ಸ್ವರ್ಣವಲ್ಲಿ ಗಂಗಾಧರ ಶ್ರೀಗಳ ಸಲಹೆ

ಹಿಂದೂ ಸಮಾಜೋತ್ಸವದಲ್ಲಿ ಸ್ವರ್ಣವಲ್ಲಿ ಗಂಗಾಧರ ಶ್ರೀಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 16:07 IST
Last Updated 13 ನವೆಂಬರ್ 2022, 16:07 IST
ಶಿರಸಿ ತಾಲ್ಲೂಕಿನ ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
ಶಿರಸಿ ತಾಲ್ಲೂಕಿನ ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.   

ಶಿರಸಿ: ‘ಸಂತತಿ ನಿಯಂತ್ರಣ ವಿಚಾರಕ್ಕೆ ಹಿಂದೂ ಧರ್ಮೀಯರು ಆಸಕ್ತಿ ತೋರುತ್ತಿದ್ದಾರೆ. ಹಿಂದೂಗಳ ಸಂಖ್ಯೆ ಇಳಿಕೆಯಾಗದಂತೆ ಎಚ್ಚರಿಕೆ ವಹಿಸಿ’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ದೇವನಳ್ಳಿ ಗ್ರಾಮದ ರಾಗಿಬಯಲಿನ ರಾಣಿ ಚನ್ನಭೈರಾದೇವಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂಗಳಿಗೆ ಹಿಂದೂಸ್ತಾನ ಮಾತ್ರ ಏಕೈಕ ನೆಲೆ. ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಆತಂಕ ಎದುರಾಗಿದ್ದು ಈ ಬಗ್ಗೆ ಎಚ್ಚರಿಕೆ ಇರಲಿ. ಧರ್ಮಗ್ರಂಥಗಳ ಪರಿಚಯ ಅನೇಕರಿಗೆ ಇಲ್ಲ. ಧರ್ಮಗ್ರಂಥಗಳನ್ನು ಅಧ್ಯಯನ ಮಾಡುವ ರೂಢಿ ಇಟ್ಟುಕೊಳ್ಳಬೇಕು’ ಎಂದರು.

ADVERTISEMENT

‘ಮಕ್ಕಳಿಗೆ ತಡವಾಗಿ ವಿವಾಹ ಮಾಡುವ ತಪ್ಪು ಮಾಡಲಾಗುತ್ತಿದೆ‌. ಇದು ವಿಚ್ಛೇದನಕ್ಕೂ ಕಾರಣವಾಗುತ್ತಿದೆ‌. ವಿವಾಹಕ್ಕೆ ವಯಸ್ಸಿನ ಮಿತಿಗೆ ಧರ್ಮದ ಆಧಾರದಲ್ಲಿ ನಿಯಮ ರೂಪಿಸಿದ್ದು ತಪ್ಪಾಗಿದೆ’ ಎಂದರು.

ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ, ‘ಸಮಾಜದ ಅನಾಹುತಕ್ಕೆ ಈಗಿನ ಶಿಕ್ಷಣ ವ್ಯವಸ್ಥೆ ಕಾರಣವಾಗಿದೆ. ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ ದೇಶದಲ್ಲಿದೆ. ಶ್ರೇಷ್ಠತೆಗೆ ಹೊಡೆದಾಟ ಬೇಡ. ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು’ ದರು.

ಅಂಡಗಿಯ ನಾಮಧಾರಿ ಗುರುಮಠದ ಕಲ್ಯಾಣ ಸ್ವಾಮೀಜಿ, ‘ಧರ್ಮಗುರುವಿನ ಸೇವೆ ಮಾಡಬೇಕು. ಅಧರ್ಮದ ವಿರುದ್ಧ ಗೆಲ್ಲಲ್ಲು ಧರ್ಮ ರಕ್ಷಣೆ ಆಗಬೇಕು’ ಎಂದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ‘ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಕ್ಕರೆ ಧರ್ಮ ರಕ್ಷಣೆ ಸಾಧ್ಯವಿದೆ. ಜಗತ್ತಿನಲ್ಲಿ ಹಿಂದೂ ಎಂಬುದು ಮಾತ್ರ ಧರ್ಮ. ಉಳಿದವುಗಳೆಲ್ಲ ರಿಲೀಜನ್‍ಗಳು. ಧರ್ಮ ಎಂಬುದು ಬಟ್ಟೆಯಂತೆ ಕಳಚಿ ಬದುಕಲು ಸಾಧ್ಯವಿಲ್ಲ. ಅದು ಜೀವನದ ಅವಿಭಾಜ್ಯ ಭಾಗ’ ಎಂದರು.

ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ, ಹಿಂದೂ ಸಮಾಜೋತ್ಸವ ಸಮಿತಿಯ ಸಂಚಾಲಕ ಕೇಶವ ಮರಾಠೆ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.