ADVERTISEMENT

ಮುಂಡಗೋಡ | ಬಣ್ಣ ಬಳಸದೆ ಹೋಳಿ ಆಚರಿಸುವ ಗೌಳಿಗರು

ಆಧುನೀಕತೆಯ ನಡುವೆಯೂ ಸಂಪ್ರದಾಯ ಮರೆಯದ ಯುವ ಸಮೂಹ

​ಶಾಂತೇಶ ಬೆನಕನಕೊಪ್ಪ
Published 15 ಮಾರ್ಚ್ 2025, 5:33 IST
Last Updated 15 ಮಾರ್ಚ್ 2025, 5:33 IST
ಮುಂಡಗೋಡ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ದನಗರ ಗೌಳಿ ಸಮುದಾಯದವರು ಹೋಳಿ ಹಬ್ಬದ ಅಂಗವಾಗಿ ಸಂಚರಿಸಲು ಅಣಿಯಾಗಿರುವುದು(ಸಂಗ್ರಹ ಚಿತ್ರ)
ಮುಂಡಗೋಡ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ದನಗರ ಗೌಳಿ ಸಮುದಾಯದವರು ಹೋಳಿ ಹಬ್ಬದ ಅಂಗವಾಗಿ ಸಂಚರಿಸಲು ಅಣಿಯಾಗಿರುವುದು(ಸಂಗ್ರಹ ಚಿತ್ರ)   

ಮುಂಡಗೋಡ: ದಟ್ಟ ಕಾನನದ ಮಧ್ಯೆ ನೆಲೆಸಿರುವ ದನಗರ ಗೌಳಿ ಸಮುದಾಯದವರ ಹೋಳಿ ಭಿನ್ನವಾಗಿರುತ್ತದೆ. ಬಣ್ಣಗಳ ಬಳಕೆ ಮಾಡದೇ, ಬಣ್ಣ ಬಣ್ಣದ ಪೋಷಾಕುಗಳನ್ನು ಧರಿಸಿ, ಬಣ್ಣದಾಟವನ್ನು ಸಾಂಪ್ರದಾಯಿಕವಾಗಿ ಆಚರಿಸುವುದು ಇವರ ವಿಶೇಷ.

ಗೌಳಿಗರು ಆಚರಿಸುವ ಹೋಳಿಯಲ್ಲಿ, ಯಾವುದೇ ರಾಸಾಯನಿಕ ಬಣ್ಣ ಬಳಕೆಯಾಗುವುದಿಲ್ಲ. ಸಗಣಿಯಿಂದ ಮಾಡಿರುವ ಬೆರಣಿಯನ್ನು ಸುಟ್ಟು, ಅದರ ಬೂದಿಯನ್ನು ಮೈಗೆ ಹಚ್ಚಿಕೊಂಡು ಹೋಳಿ ಆಚರಣೆಗೆ ಮುಂದಡಿ ಇಡುವುದು ಈ ಸಮುದಾಯದವರ ವಿಶಿಷ್ಟ ಆಚರಣೆಯಾಗಿದೆ.

ತಾಲ್ಲೂಕಿನ 30ಕ್ಕೂ ಹೆಚ್ಚು ಕಡೆ ನಿಸರ್ಗದ ಮಧ್ಯೆ ನೆಲೆ ಕಂಡುಕೊಂಡಿರುವ ದನಗರ ಗೌಳಿ ಸಮುದಾಯದಲ್ಲಿ, ಆಧುನಿಕತೆಯ ಸ್ಪರ್ಶ ಸೋಂಕಿದರೂ, ಸಾಂಪ್ರದಾಯಿಕ ಆಚರಣೆಗೆ ಹೆಚ್ಚು ಒತ್ತು ನೀಡುತ್ತಾರೆ. ಉದ್ಯೋಗ ಮತ್ತಿತರ ಕಾರಣಗಳಿಂದ ಬೇರೆ ಊರುಗಳಲ್ಲಿ ನೆಲೆಸಿರುವ ಈ ಸಮುದಾಯದ ಯುವಕರು, ಅಲ್ಲಿನ ಜನರೊಂದಿಗೆ ಬೆರೆತು ಹೋಳಿ ಆಚರಿಸುತ್ತಾರೆ. ಆದರೆ, ಗೌಳಿವಾಡಾಗಳಲ್ಲಿ ಮಾತ್ರ ಬೂದಿಯೇ ಬಣ್ಣದಾಟದ ಬಣ್ಣ ಅಗಿರುತ್ತದೆ.

ADVERTISEMENT

‘ಪ್ರತಿ ಗೌಳಿವಾಡಾಗಳಲ್ಲಿ ಹೋಳೋಬಾ ದೇವ (ಹೋಳಿ ಹಬ್ಬದಂದು ಪೂಜಿಸಲ್ಪಡುವ ಕಲ್ಲು) ಇರುತ್ತದೆ. ಅಲ್ಲಿ ಹೋಳಿ ಹುಣ್ಣಿಮೆಯ ರಾತ್ರಿಯಂದು, ಸುತ್ತಲೂ ಬೆರಣಿಗಳನ್ನು ಇಡಲಾಗುತ್ತದೆ. ಗೌಳಿವಾಡಾದಲ್ಲಿ ನಿಗದಿಪಡಿಸಿರುವ ಒಂದು ಮನೆತನದವರು ಹೋಳಿ ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬೆರಣಿಗಳ ರಾಶಿಯನ್ನು ಸುಡಲಾಗುತ್ತದೆ. ಪ್ರತಿ ಮನೆಯಿಂದ ಪ್ರಸಾದದ ರೂಪದಲ್ಲಿ ಹೋಳಿಗೆಯನ್ನು ಅಲ್ಲಿ ತರಲಾಗುತ್ತದೆ. ತಂದಿರುವ ಪ್ರಸಾದವನ್ನು ಮಿಶ್ರಣ ಮಾಡಿ ಎಲ್ಲರೂ ಸವಿಯುತ್ತಾರೆ. ಈ ಮೂಲಕ ಹೋಳಿ ಹುಣ್ಣಿಮೆಯ ದಿನದಂದು ಬಣ್ಣ ಇಲ್ಲದ ಬಣ್ಣದಾಟಕ್ಕೆ ಚಾಲನೆ ನೀಡಲಾಗುತ್ತದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ ವರಕ್‌.

‘ಹುಣ್ಣಿಮೆಯ ಮಾರನೆಯ ದಿನ ಪ್ರತಿ ಮನೆಯಿಂದ ಕೊಡದಲ್ಲಿ ನೀರನ್ನು ತಂದು ಪೂಜಿಸಲ್ಪಟ್ಟ ಹೋಳಿಕಲ್ಲಿಗೆ ಸುರಿಯುತ್ತಾರೆ. ಅಲ್ಲಿರುವ ಬೂದಿಯನ್ನು ಮೈಗೆ ಹಚ್ಚಿಕೊಂಡು ಬಣ್ಣದಾಟ ಆಡುತ್ತಾರೆ. ಚಿಣ್ಣರು ಹುಲಿ, ಕರಡಿ ಸಹಿತ ವಿವಿಧ ಪ್ರಾಣಿಗಳ ವೇಷ, ಮುಖವಾಡ ಹಾಕಿಕೊಂಡು ಕುಣಿಯುತ್ತಾರೆ. ಯುವಕರು ಬೆರಣಿಯ ಬೂದಿಯಲ್ಲಿ ಹೊರಳಾಡುತ್ತಾರೆ. ಪ್ರತಿ ಮನೆ ಮನೆಗೆ ತೆರಳಿ ತೆಂಗಿನಕಾಯಿ ಸಹಿತ ದವಸಧಾನ್ಯವನ್ನು ಪ್ರಸಾದದ ರೂಪದಲ್ಲಿ ಸಂಗ್ರಹಿಸುತ್ತಾರೆ. ಹೋಳಿ ಹಬ್ಬಕ್ಕೆಂದೇ ಇರುವ ಹಾಡುಗಳನ್ನು ಹಾಡುತ್ತ ನೃತ್ಯ ಮಾಡುತ್ತಾರೆ’ ಎಂದು ದನಗರಗೌಳಿ ಸಮುದಾಯದ ಯುವ ಮುಖಂಡ ಸಿದ್ದು ತೊರವತ್ ಹೇಳಿದರು.

ಊರೂರು ಸಂಚಾರ ‘ಹೋಳಿ ಹಬ್ಬದ ಎರಡನೇ ದಿನದಿಂದ ಯುವಪಡೆಯು ಒಂದೊಂದು ತಂಡವನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಬಣ್ಣದ ಪೋಷಾಕು ಧರಿಸಿ ಊರೂರು ಸಂಚಾರ ನಡೆಸುತ್ತಾರೆ. ಪಟ್ಟಣ ಸೇರಿದಂತೆ ಇನ್ನಿತರ ಗೌಳಿವಾಡಾಗಳಲ್ಲಿಯೂ ಸಂಚಾರ ನಡೆಸುತ್ತಾರೆ. ಅಲ್ಲಿ ಸಂಗ್ರಹವಾಗುವ ದವಸಧಾನ್ಯ ದುಡ್ಡು ಎಲ್ಲವನ್ನೂ ಪಡೆದುಕೊಂಡು ಐದನೇ ದಿನಕ್ಕೆ ತಮ್ಮ ಗೌಳಿವಾಡಾಕ್ಕೆ ಮರಳುತ್ತಾರೆ. ಅಲ್ಲಿ ಹೋಳಿ ಹಬ್ಬದ ವಿಶಿಷ್ಟ ಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಂತರ ಬಲಿ ಆಚರಣೆ ಮೂಲಕ ಬಣ್ಣ ಬಳಸದ ರಂಗಿನಾಟಕ್ಕೆ ತೆರೆ ಎಳೆಯಲಾಗುತ್ತದೆ’ ಎಂದು ಜಾನು ಎಡಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.