ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ಸಂಪರ್ಕಿಸುವ ರಾಷ್ಟೀಯ ಹೆದ್ದಾರಿ–63 ನಿರಂತರ ಮಳೆಯಿಂದಾಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಉತ್ತರ ಕರ್ನಾಟಕ ಪ್ರದೇಶವನ್ನು ಕರಾವಿಯೊಂದಿಗೆ ಬೆಸೆಯುವ ಪ್ರಮುಖ ಮಾರ್ಗಗಳಲ್ಲಿ ಈ ಹೆದ್ದಾರಿಯೂ ಒಂದು. ನಿತ್ಯ ಈ ಮಾರ್ಗದಲ್ಲಿ ಭಾರಿ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಹದಗೆಟ್ಟ ಸ್ಥಿತಿಯಲ್ಲಿನ ರಸ್ತೆಯಲ್ಲಿ ದಿನಕ್ಕೆ ಹಲವು ಅಪಘಾತಗಳು ಉಂಟಾಗುತ್ತಿವೆ.
ಅಂಕೋಲಾದ ಬಾಳೆಗುಳಿ ಕ್ರಾಸ್‌ನಿಂದ ಸುಂಕಸಾಳದ ರಾಮನಗುಳಿಯವರೆಗೆ ಹೆದ್ದಾರಿಯು ಸಂಪೂರ್ಣ ಹೊಂಡ ಬಿದ್ದು ರಸ್ತೆ ಹದಗೆಟ್ಟಿದೆ. ಈಚೆಗಷ್ಟೇ ಬೆಳಗಾವಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಅಗಸೂರು ಸಮೀಪ ರಾತ್ರಿ ಹೊಂಡ ತಪ್ಪಿಸಲು ಹೋಗಿ ಪಕ್ಕದ ಹಳ್ಳಕ್ಕೆ ಬಿದ್ದು ಓರ್ವ ಪ್ರಯಾಣಿಕ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
‘ದೊಡ್ಡಮಟ್ಟದ ಅಪಘಾತ ನಡೆದ ಸ್ಥಳದಲ್ಲಿ ನಾಲ್ಕು ಬ್ಯಾರೀಕೆಡ್ ಅಳವಡಿಸಲಾಗಿದೆ. ಆದರೆ, ಇಡೀ ರಸ್ತೆಯುದ್ದಕ್ಕೂ ಹೊಂಡ ಬಿದ್ದಿದ್ದು ವಾಹನ ಸವಾರರ ಸುರಕ್ಷತೆಗೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ’ ಎನ್ನುತ್ತಾರೆ ಅಗಸೂರು ಗ್ರಾಮಸ್ಥರು.
‘ಹೊನ್ನಳ್ಳಿ ಸೇತುವೆ ಹಾಗೂ ಸುಂಕಸಾಳದ ಹತ್ತಿರ ಸಂಪೂರ್ಣ ಹದಗೆಟ್ಟು ಜೋರಾಗಿ ಮಳೆ ಬರುವ ಸಂದರ್ಭದಲ್ಲಿ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ವಾಹನ ಸವಾರರು ಅರ್ಧ ಗಂಟೆಗಟ್ಟಲೆ ನಿಂತು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ, ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರು ಕೆಲಸದ ನಿಮಿತ ಪಟ್ಟಣಕ್ಕೆ ಬೈಕ್, ಆಟೋಗಳ ಮೂಲಕ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ’ ಎಂಬುದು ಸ್ಥಳೀಯರ ಅಳಲು.
ಹೆದ್ದಾರಿ ದುರಸ್ಥಿಯ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಯಿಂದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲಸದಾನಂದ ನಾಯಕ ಸುಂಕಸಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
ಸರಕು ಸಾಗಣೆಯ ಮಾರ್ಗ
‘ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರು ಕರಾವಳಿಯ ಇನ್ನಿತರ ಸ್ಥಳಗಳಿಗೆ ತರಕಾರಿ ದಿನಸಿ ಸಾಮಗ್ರಿಗಳ ಪೂರೈಕೆ ನಡೆಯಲು ಸದ್ಯ ಇದೇ ಪ್ರಮುಖ ಮಾರ್ಗ. ಮಂಗಳೂರಿನಿಂದ ಅಡುಗೆ ಅನಿಲ ತೈಲೋತ್ಪನ್ನಗಳನ್ನೂ ಸಾಗಿಸುವ ಗ್ಯಾಸ್ ಟ್ಯಾಂಕರ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಸ್ಥಳಿಯರು ಸರಕು ಸಾಗಣೆಗೆ ಕೆಲಸಗಳಿಗೆ ಸಾಗಲು ಅವಲಂಭಿಸಿದ ರಸ್ತೆ ಹದಗೆಟ್ಟಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ’ ಎನ್ನುತ್ತಾರೆ ಅಂಕೋಲಾ ಭಾಗದ ಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.