ಪ್ರಣವಾನಂದ ಸ್ವಾಮೀಜಿ
ಅಂಕೋಲಾ: ‘ಕಳೆದ ವರ್ಷ ಶಿರೂರು ಗುಡ್ಡ ಕುಸಿತದಿಂದ ಮೃತಪಟ್ಟವರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೇ 8ರಂದು ಗುಡ್ಡ ಕುಸಿದ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ನಡೆಸಲು ಕೆಲವು ದಿನಗಳವರೆಗೆ ಮುಂದೂಡಿದ್ದೇವೆ’ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘11 ಜನರ ಸಾವಿಗೆ ಕಾರಣವಾದ ಐ.ಆರ್.ಬಿ. ಕಂಪನಿ ವಿರುದ್ಧ ಹಾಗೂ ಸೂಕ್ತ ಪರಿಹಾರಕ್ಕಾಗಿ ಸತ್ಯಾಗ್ರಹದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿತ್ತು. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಕೈಗಾ ಅಣುವಿದ್ಯುತ್ ಸ್ಥಾವರ ಹಾಗೂ ನೌಕನೆಲೆಯಂತಹ ಸೂಕ್ಷ್ಮ ಪ್ರದೇಶಗಳಿರುವ ಕಾರಣ ಜಿಲ್ಲೆಯನ್ನು ರೆಡ್ ಝೋನ್ ಪ್ರದೇಶವೆಂದು ಘೋಷಿಸಲಾಗಿದೆ. ದೇಶ ಮೊದಲು ಎನ್ನುವ ನೀತಿ ಅನುಸರಿಸಿ ಹೋರಾಟ ಮುಂದೂಡಲಾಗಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಜಿಲ್ಲಾಯಾದ್ಯಂತ 20 ದಿನಗಳವರೆಗೆ ಪಾದಯಾತ್ರೆ ಕೈಗೊಂಡು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಲುವನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನೊಂದವರ ಪರ ನಮ್ಮ ಹೋರಾಟ ನಿರಂತರವಾಗಿರುತ್ತದೆ’ ಎಂದು ತಿಳಿಸಿದರು.
‘ಈ ಘಟನೆಯಲ್ಲಿ ಅಪರಾಧಿ ಸ್ಥಾನದಲ್ಲಿರುವ ಐ.ಆರ್.ಬಿ. ಕಂಪನಿಯನ್ನು ಖುಲಾಸೆ ಮಾಡಲು ಷಡ್ಯಂತ್ರ ರೂಪಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿರುದ್ಧವೂ ಕಾನೂನು ಹೋರಾಟ ಮಾಡಲಾಗುವುದು’ ಎಂದರು.
ದಾಮೋದರ ನಾಯ್ಕ, ಶ್ರೀನಿವಾಸ್ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.