ADVERTISEMENT

ಬೇಟೆಗಾರರ ಗುಂಡೇಟಿಗೆ ಗರ್ಭಿಣಿ ಚಿರತೆ ಬಲಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:43 IST
Last Updated 5 ಏಪ್ರಿಲ್ 2022, 15:43 IST
ಯಲ್ಲಾಪುರ–ಬಿಸಗೋಡು ಮಾರ್ಗದಲ್ಲಿ ಗರ್ಭಿಣಿ ಚಿರತೆಯೊಂದು ಬೇಟೆಗಾರರ ಗುಂಡಿಗೆ ಬಲಿಯಾಗಿರುವುದು
ಯಲ್ಲಾಪುರ–ಬಿಸಗೋಡು ಮಾರ್ಗದಲ್ಲಿ ಗರ್ಭಿಣಿ ಚಿರತೆಯೊಂದು ಬೇಟೆಗಾರರ ಗುಂಡಿಗೆ ಬಲಿಯಾಗಿರುವುದು   

ಯಲ್ಲಾಪುರ: ಯಲ್ಲಾಪುರ–ಬಿಸಗೋಡು ರಸ್ತೆ ಬದಿಯಲ್ಲಿ ಗರ್ಭಿಣಿ ಚಿರತೆಯೊಂದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದೆ. ಅದರ ಗರ್ಭದಲ್ಲಿದ್ದ ಎರಡು ಮರಿಗಳೂ ಮೃತಪಟ್ಟಿವೆ.

ಮಂಗಳವಾರ ಬೆಳಗಿನ ಜಾವ ಚಿರತೆಯ ಮೃತದೇಹವನ್ನು ಸಾರ್ವಜನಿಕರು ಗಮನಿಸಿದ್ದರು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಜಂಗಮಶೆಟ್ಟಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಚಿರತೆಯ ಕಳೇಬರವನ್ನು ಯಲ್ಲಾಪುರ ವಲಯ ಕಚೇರಿಯ ಆವರಣಕ್ಕೆ ತಂದರು. ನ್ಯಾಯಾಲಯದ ಆದೇಶದಂತೆ ತಾಲ್ಲೂಕು ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ADVERTISEMENT

ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಚಿರತೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಚಿರತೆ ಗುಂಡೇಟಿನಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್.ಎ. ಹಾಗೂ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ಕಳೇಬರವನ್ನು ದಹನ ಮಾಡಲಾಯಿತು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

‘ಈ ಅರಣ್ಯ ಪ್ರದೇಶವು ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇಲ್ಲಿ ಅವುಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಬೇಟೆಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಯಲ್ಲಾಪುರ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.