ADVERTISEMENT

ಸಂತೋಷ ನಾಯ್ಕ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪವಿಲ್ಲ: ವಸಂತ ನಾಯ್ಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:50 IST
Last Updated 12 ಜೂನ್ 2025, 13:50 IST
ವಸಂತ ನಾಯ್ಕ ಮನಮನೆ
ವಸಂತ ನಾಯ್ಕ ಮನಮನೆ   

ಸಿದ್ದಾಪುರ: ‘ಯಾವುದೇ ಪ್ರಕರಣದಲ್ಲಿ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಸಂತೋಷ ನಾಯ್ಕ ಸಾವಿನ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.

ಸಂತೋಷ್ ನಾಯ್ಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿ ಹೊರಬಂದ ನಂತರ ಪತ್ರಕರ್ತರೊಂದಿಗೆ ಗುರುವಾರ ಅವರು ಮಾತನಾಡಿದರು.

‘ಕಾಳೇನಳ್ಳಿಯಲ್ಲಿ ಸಂತೋಷ ನಾಯ್ಕ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೂ, ನನಗೂ ಏನೂ ಸಂಬಂಧ ಇಲ್ಲ. ಇವತ್ತು ಅನವಶ್ಯಕವಾಗಿ ನನ್ನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ನಾನೇನಾದರೂ ತಪ್ಪು ಮಾಡಿದ್ದಿದ್ದರೆ, ಈ ಪ್ರಕರಣದಲ್ಲಿ ನನ್ನದೇನಾದರೂ ಹಸ್ತಕ್ಷೇಪವಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ಹಾಕಲಿ. ನಾನು ಸಿದ್ಧನಿದ್ದೇನೆ. ಆದರೆ ಅನವಶ್ಯಕವಾಗಿ ಎಫ್‌ಐಆರ್‌ ಮಾಡಿದರೆ ನಾನು ಕೂಡ ಅಧಿಕಾರಿಗಳ ವಿರುದ್ಧ, ಬಿಜೆಪಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ನಾನು 15 ವರ್ಷಗಳಿಂದ ರಾಜಕಾರಣ ಮಾಡುತ್ತ ಬಂದಿದ್ದು, ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ’ ಎಂದು ಹೇಳಿದರು.

ADVERTISEMENT

‘ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ. ನಾಯ್ಕ ಸಂಚು ರೂಪಿಸಿದ್ದಾರೆ. ನನ್ನ ಘನತೆಗೆ ಧಕ್ಕೆ ತಂದ ಕಾರಣಕ್ಕೆ ಅವರಿಗೆ ವಕೀಲರ ಮೂಲಕ ಶೋಕಾಸ್ ನೋಟಿಸ್ ನೀಡಿ, ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.