ಶಿರಸಿ: ದುರ್ಗಮ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಇಲಾಜ್ ಸ್ಮಾರ್ಟ್ ಕ್ಲಿನಿಕ್ ಸೇವೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಕೊಡ್‌ವೆಸ್ ಸಂಸ್ಥೆ, ಬಯೋಕಾನ್ ಫೌಂಡೇಷನ್ ಹಾಗೂ ಬಂಡಲ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆರಂಭಿಸಲಾದ ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪಶ್ಚಿಮ ಘಟ್ಟದ ಕಡಿದಾದ ಗುಡ್ಡ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿರುವ ಜನರ ಆರೋಗ್ಯ ಸೇವೆಗೆ ವಿನೂತನ ಮಾದರಿಯಲ್ಲಿ ಇಲಾಜ್ ಸ್ಮಾರ್ಟ್ ಕ್ಲಿನಿಕ್ ಯೋಜನೆಯನ್ನು ರೂಪಿಸಿದ ಬಯೋಕಾನ್ ಫೌಂಡೇಷನ್, ಇತರ ಕಡೆಗಳಲ್ಲೂ ಸ್ಮಾರ್ಟ್ ಕ್ಲಿನಿಕ್ ಆರಂಭಿಸುವಂತೆ’ ಮನವಿ ಮಾಡಿದರು.
ಬಯೋಕಾನ್ ಫೌಂಡೇಷನ್‌ನ ಮಿಷನ್ ಡೈರೆಕ್ಟರ್ ಅನುಪಮಾ ಶೆಟ್ಟಿ ಮಾತನಾಡಿ, ‘ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ್ನು ಮೊದಲ ಬಾರಿಗೆ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಇತರ ಕಡೆಗಳಲ್ಲೂ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿ, ‘ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನಿಂದ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 8-10 ಕಿ.ಮೀ. ಪರಿಧಿಯಲ್ಲಿ ಬರುವ 20ಕ್ಕಿಂತ ಹೆಚ್ಚು ಗ್ರಾಮಗಳ ಜನರಿಗೆ ಸಂಪೂರ್ಣ ಆರೋಗ್ಯ ಉಚಿತ ಸೇವೆ ಒದಗಿಸಲಾಗುತ್ತಿದ್ದು, ಎಲ್ಲಾ ಸಹಕಾರ ನೀಡುವುದಾಗಿ‘ ತಿಳಿಸಿದರು.
ಬಯೋಕಾನ್ ಫೌಂಡೇಷನ್‌ನ ವ್ಯವಸ್ಥಾಪಕ ಡಾ.ವಿಕ್ರಮ್, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ, ಪಿಡಿಒ ಯೋಗಾನಂದ ಪಟಗಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಗೌಡ, ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಮೋಹನ ಪಾಟೀಲ ಇತರರಿದ್ದರು. ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ನಿರೂಪಿಸಿದರು. ಯೋಜನಾ ಸಂಯೋಜಕ ಯಶವಂತ ಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.