ಶಿರಸಿ: ನಗರದ ವಿವಿಧ ಕಡೆಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಆಗುತ್ತಿರುವ ಹಾಗೂ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡ ಮಾಲೀಕರಿಗೆ ನಗರಾಡಳಿತವು ಮೂರು ನೋಟಿಸ್ ನೀಡಿ ಸುಮ್ಮನಾಗುತ್ತಿದೆ. ಇದರಿಂದಾಗಿ ಅಕ್ರಮ ಕಟ್ಟಡ ಕಾಮಗಾರಿ ನಡೆಸುವವರಿಗೆ ಯಾವುದೇ ಭಯವಿಲ್ಲದಂತಾಗಿದ್ದು, ಮತ್ತಷ್ಟು ಚಟುವಟಿಕೆ ಎಗ್ಗಿಲ್ಲದೇ ನಡೆಯುವಂತಾಗಿದೆ.
ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಬಹುತೇಕ ಎಲ್ಲ ಕಡೆ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿವೆ. ಶಿವಾಜಿ ಚೌಕ, ಸಿಪಿ ಬಝಾರ, ಉಣ್ಣೆಮಠಗಲ್ಲಿ ಸೇರಿದಂತೆ ಪ್ರಮುಖ ವ್ಯಾಪಾರಿ ಪ್ರದೇಶಗಳಲ್ಲಿ ಹೊಸ ಕಟ್ಟಡಗಳು ನಿಯಮಾವಳಿ ಅನುಸರಿಸಿ ನಿರ್ಮಿಸುತ್ತಿಲ್ಲ. ಕೆಲವೆಡೆ ಚರಂಡಿ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದ್ದು, ಸಾರ್ವಜನಿಕರು ನಗರಸಭೆ ಗಮನಕ್ಕೆ ತರುವ ಕಾರ್ಯ ಮಾಡಿದರೂ ಕಾಮಗಾರಿ ಮಾತ್ರ ನಿಂತಿಲ್ಲ’ ಎಂಬುದು ಸಾರ್ವಜನಿಕರ ದೂರಾಗಿದೆ.
‘ನಗರ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕಡೆ ನಿಯಮಾವಳಿ ಗಾಳಿಗೆ ತೂರಿ ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದರೆ ಅಲ್ಲಿನ ಅಧಿಕಾರಿಗಳು ಕಾಮಗಾರಿ ಸ್ಥಗಿತ ಮಾಡುವ ಬದಲು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡುವುದಾಗಿ ದೂರುದಾರರಿಗೆ ಭರವಸೆ ನೀಡುತ್ತಾರೆ. ಈ ಹಿಂದೆ ಹಲವು ಕಟ್ಟಡಗಳು ಅನಧಿಕೃತವಾಗಿದೆ ಎಂದು ಸಾರ್ವಜನಿಕರು ದೂರಿದಾಗ, ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರೇ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದಾಗ ನೋಟಿಸ್ ನೀಡಲಾಗಿತ್ತು. ಅನಧಿಕೃತ ಕಟ್ಟಡ ಮಾಲೀಕರ ವಿರುದ್ಧ ದನಿ ಎತ್ತದ ನಗರಸಭೆ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯು ಮೂರು ನೋಟಿಸ್ ನೀಡಿ ಸುಮ್ಮನಾಗುವುದಕ್ಕಷ್ಟೇ ಸೀಮಿತವಾದಂತಿದೆ’ ಎಂಬುದು ನಗರ ನಿವಾಸಿ ರಾಮಚಂದ್ರ ಭಟ್ ಮಾತಾಗಿದೆ.
‘ಜನನಿಬಿಡ, ವಾಹನ ದಟ್ಟಣೆ ಇರುವ ಕೆಲವೆಡೆ ವಾಹನ ನಿಲುಗಡೆ, ಸೆಟ್ ಬ್ಯಾಕ್ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗಿದೆ. ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ. ಅಂಥ ಕಟ್ಟಡವನ್ನು ವಾಣಿಜ್ಯ ಬಳಕೆಗೆ ಬಾಡಿಗೆ ನೀಡಲಾಗಿದ್ದು, ಅಂಥ ಪ್ರದೇಶದಲ್ಲೇ ವಾಹನ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ನಗರಸಭೆ ಅಧಿಕಾರಿಗಳು ಯಾರ ಒತ್ತಡಕ್ಕೆ ಸಿಲುಕಿ ಸುಮ್ಮಿನಿದ್ದಾರೋ ತಿಳಿಯುತ್ತಿಲ್ಲ. ಅನಧಿಕೃತ ಕಟ್ಟಡ ಮಾಲೀಕರು ಹಾಗೂ ನಗರಸಭೆ ಅಧಿಕಾರಿಗಳ ಹೊಂದಾಣಿಕೆಯ ಕಾರಣ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಅವರು.
ನೋಟಿಸ್ ನೀಡಿ ಸುಮ್ಮನಾಗುವ ಅಧಿಕಾರಿಗಳು
ಎರಡು ಮೂರು ವರ್ಷಗಳಿಂದೀಚೆ ನಗರದಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿವೆ. ಅಂಥ ಕಟ್ಟಡ ಮಾಲೀಕರಿಗೆ ಸಾಕಷ್ಟು ಬಾರಿ ನೋಟಿಸ್ ಕೂಡ ನೀಡಲಾಗಿದೆ. ಮೂರು ನೋಟಿಸ್ ನಂತರ ಅಂಥ ಕಟ್ಟಡ ತೆರವು ಕಾರ್ಯ ಆಗಬೇಕು. ಆದರೆ ಅಂಥ ಯಾವುದೇ ಒಂದು ಉದಾಹರಣೆ ಕೂಡ ನಡೆದಿಲ್ಲ. ಸಾಮಾನ್ಯರು ಮನೆ ದುರಸ್ತಿ ಇಲ್ಲವೇ ಎರಡನೇ ಅಂತಸ್ತು ನಿರ್ಮಿಸುವ ವೇಳೆ ಸಾಕಷ್ಟು ನಿಯಮ ಮಾತನಾಡುವ ನಗರಸಭೆ ಅಧಿಕಾರಿಗಳು ನಿಯಮಾವಳಿ ಮುರಿದು ನಿರ್ಮಿಸುವ ಬೃಹತ್ ಕಟ್ಟಡಗಳ ಮಾಲೀಕರಿಗೆ ಏನೂ ಮಾಡುತ್ತಿಲ್ಲ. ನೋಟಿಸ್‌ಗೆ ಉತ್ತರ ನೀಡುವ ಕೆಲಸವನ್ನೂ ಕಟ್ಟಡ ಮಾಲೀಕರು ಮಾಡುತ್ತಿಲ್ಲ. ಸಾರ್ವಜನಿಕರು ಸುಮ್ಮನೇ ದೂರು ನೀಡುವಂತಾಗಿದೆ ಎಂಬುದು ಹಲವು ಜನರ ಬೇಸರದ ಮಾತಾಗಿದೆ.
ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ ಕೆಲವರಿಗೆ ಈಗಾಗಲೇ ಮೂರು ನೋಟಿಸ್ ನೀಡಿದ್ದು ಮುಂದಿನ ಕ್ರಮವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು.-ಶಿವರಾಜ ಪ್ರಭಾರ, ಪೌರಾಯುಕ್ತ
ನಗರದಲ್ಲಿ ಎಗ್ಗಿಲ್ಲದೇ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು ಸಾರ್ವಜನಿಕರು ಮಾಹಿತಿ ನೀಡಿದರೂ ನಗರಸಭೆ ಅಧಿಕಾರಿಗಳು ಅವುಗಳತ್ತ ಮುಖ ಮಾಡುತ್ತಿಲ್ಲ. ಇದನ್ನು ನೋಡಿದರೆ ಧಿಕಾರಿಗಳ ಮೇಲೆ ಸಂಶಯ ಮೂಡುತ್ತಿದೆ.-ಪರಮಾನಂದ ಹೆಗಡೆ, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.