ಕುಮಟಾ: ‘ಮೀನುಗಾರಿಕೆಯನ್ನು ಹೆಚ್ಚು ವೃತ್ತಿಪರ ಹಾಗೂ ಲಾಭದಾಯಕವಾಗಿ ನಡೆಸುವ ಉದ್ದೇಶದಿಂದ ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ತರಬೇತಿ ನಡೆಸುವ ಉದ್ದೇಶದಿಂದ ಪ್ರತ್ಯೇಕ ತರಬೇತಿ ಕಟ್ಟಡ ನಿರ್ಮಿಸಲು ಆದ್ಯತೆ ನೀಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಮೀನುಗಾರಿಕಾ ತರಬೇತಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ‘ಮೀನುಗಾರಿಕೆ ನಡೆಸುವಾಗ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತ ₹8ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಮತ್ಸ್ಯಾಶ್ರಯ ಮನೆಗಳನ್ನು ಎಲ್ಲ ಮೀನುಗಾರಿಗೂ ನೀಡುವ ಬಗ್ಗೆ ಕ್ರಮ ಕೈಕೊಳ್ಳಲಾಗುವುದು. ಮೀನುಗಾರರು ವಿವಿಧ ತರಬೇತಿಗಳ ಮೂಲಕ ಮೀನುಗಾರಿಕೆಯಲ್ಲಿ ಪ್ರಾವಿಣ್ಯತೆ ಪಡೆಯುವುದರ ಜೊತೆಗೆ ಮೀನುಗಾರಿಕೆಗೆ ತೆರಳುವಾಗ ಎಲ್ಲ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು’ ಎಂದರು.
ಶಾಸಕ ದಿನಕರ ಶೆಟ್ಟಿ, ‘ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಸಚಿವರು ಹೆಚ್ಚೆಚ್ಚು ಸೌಲಭ್ಯಗಳನ್ನು ಸರ್ಕಾರದಿಂದ ಮಂಜೂರಿ ಮಾಡಿಸಬೇಕು. ಜಿಲ್ಲೆ ಮೀನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಹೊಸ ಯೋಜನೆಗಳನ್ನು ತರಬೇಕು’ ಎಂದರು.
ಇಲಾಖೆಯ ಉಪ ನಿರ್ದೇಶಕ ಪ್ರತೀಕ ಶೆಟ್ಟಿ, ಸಹಾಯಕ ನಿರ್ದೇಶಕ ಸಚಿನ್ ಪುತ್ರನ್, ತಾಲ್ಲೂಕು ಪಂಚಾಯಿತಿ ಇಒ ಆರ್.ಎಲ್. ಭಟ್ಟ, ಪುರಸಭೆ ಸದಸ್ಯ ಸೂರ್ಯಕಾಂತ ಗೌಡ ಇದ್ದರು.
ಶಿಷ್ಟಾಚಾರ ಉಲ್ಲಂಘನೆ; ಆಕ್ಷೇಪ
ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಆಹ್ವಾನ ನೀಡದಿರುವ ಬಗ್ಗೆ ಪುರಸಭೆ ಉಪಾಧ್ಯಕ್ಷ ಮಹೇಶ ನಾಯ್ಕ ಆಕ್ಷೇಪಿಸಿದ್ದಾರೆ. ‘ಮೀನುಗಾರಿಕಾ ಬಂದರು ಮೀನು ಮಾರುಕಟ್ಟೆ ಹಾಗೂ ಮೀನುಗಾರಿಕಾ ತರಬೇತಿ ಕಟ್ಟಡ ಪುರಸಭೆ ವ್ಯಾಪ್ತಿಯಲ್ಲಿಯೇ ಇದೆ. ಸರ್ಕಾರದ ಶಿಷ್ಟಾಚಾರದ ಪ್ರಕಾರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ಪುತ್ರನ್ ಅವರು ಇದು ಪುರಸಭೆಗೆ ಸಂಬಂಧಿಸಲ್ಲ ಎನ್ನುವಂತೆ ನಡೆದುಕೊಂಡಿರುವುದು ಸಮಂಜಸವಲ್ಲ’ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.