ADVERTISEMENT

ಹುನಗುಂದ: ಇಂದಿರಾ ಕ್ಯಾಂಟೀನ್‌‌ಗೆ ವರ್ಷ ಕಳೆದರೂ ಉದ್ಘಾಟನೆ ಭಾಗ್ಯವಿಲ್ಲ

ಹುನಗುಂದ: ಇಂದಿರಾ ಕ್ಯಾಂಟಿನ್ ಆರಂಭಕ್ಕೆ ನಿರಾಸಕ್ತಿ

ಸಂಗಮೇಶ ಹೂಗಾರ
Published 20 ಜೂನ್ 2020, 19:30 IST
Last Updated 20 ಜೂನ್ 2020, 19:30 IST
ಹುನಗುಂದ ಪಟ್ಟಣದ ಗುರುಭವನದ ಪಕ್ಕದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಕಟ್ಟಡ
ಹುನಗುಂದ ಪಟ್ಟಣದ ಗುರುಭವನದ ಪಕ್ಕದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಕಟ್ಟಡ   

ಹುನಗುಂದ: ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡ ಸಿದ್ಧವಾಗಿ ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಪಟ್ಟಣದ ಗುರುಭವನದ ಹತ್ತಿರ ವಾರ್ಡ್ ನಂ. 20 ರಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ ಅದನ್ನು ಉದ್ಘಾಟಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗಿದೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ‘ಹಸಿವು ಮುಕ್ತ ಕರ್ನಾಟಕ’ ಯೋಜನೆಯಡಿ ತಾಲ್ಲೂಕಿಗೊಂದು ಇಂದಿರಾ ಕ್ಯಾಂಟಿನ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗಿತ್ತು.

ADVERTISEMENT

ಇದರಲ್ಲಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಊಟೋಪಹಾರ ನೀಡಲಾಗುತ್ತಿದೆ. ಬೆಳಿಗ್ಗೆ ₹5ಕ್ಕೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ಒದಗಿಸಲಾಗುತ್ತದೆ. ಈಗಾಗಲೇ ಜಿಲ್ಲಾ ಕೇಂದ್ರ ಬಾಗಲಕೋಟೆ, ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ದೊರೆತಿದೆ. ಕೋವಿಡ್–19 ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸಿ ಇಂದಿರಾ ಕ್ಯಾಂಟಿನ್ ಛಾಪು ಮೂಡಿಸಿವೆ.

ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಐ.ಕೆ.ಗುಡದಾರಿ, ಲಾಕ್‌ಡೌನ್ ಜಾರಿಯಲ್ಲಿದ್ದರಿಂದ ವಿಳಂಬವಾಗಿದೆ. ಅಡುಗೆ ಕೋಣೆಯಲ್ಲಿ ಯಂತ್ರೋಪಕರಣ ಜೋಡಿಸುವವರು ಹೈದರಾಬಾದ್‌ನಿಂದ ಬರಬೇಕಿದೆ. ಅವರು ಬಂದ ನಂತರ ಕ್ಯಾಂಟಿನ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇಂದಿರಾ ಕ್ಯಾಂಟಿನ್‌ ನಿರ್ಮಿಸಿರುವ ಜಾಗ ಆಯಕಟ್ಟಿನಲ್ಲಿದೆ. ಪ್ರತಿ ನಿತ್ಯ ಕೆಲಸ–ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬರುವವರಿಗೆ ಕ್ಯಾಂಟಿನ್ ಅನುಕೂಲಕರವಾಗಿದೆ. ಸಂಬಂಧಪಟ್ಟವರು ಆದಷ್ಟು ಶೀಘ್ರ ಕ್ಯಾಂಟಿನ್ ಆರಂಭಿಸಲಿ ಎಂದುಸ್ಥಳೀಯರಾದ ಸಂಗಮೇಶ ಭಾವಿಕಟ್ಟಿ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.