ADVERTISEMENT

ನಕಲಿ ಎಟಿಎಂ ಕಾರ್ಡ್ ನೀಡಿ ಜನರನ್ನು ವಂಚಿಸುತ್ತಿದ್ದ ಅಂತರರಾಜ್ಯ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 15:53 IST
Last Updated 28 ಫೆಬ್ರುವರಿ 2022, 15:53 IST
ಆರೋಪಿ ಬಂಧನ
ಆರೋಪಿ ಬಂಧನ   

ಅಂಕೋಲಾ: ಎಟಿಎಂ ಕೇಂದ್ರಗಳಲ್ಲಿ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಎಸಗಿ ಹಣ ದೋಚುತ್ತಿದ್ದ ಅಂತರರಾಜ್ಯ ಕಳ್ಳನನ್ನು ಅಂಕೋಲಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಪಟ್ಟಣದ ಕೆಸಿ ರಸ್ತೆಯಲ್ಲಿನ ಎಸ್.ಬಿ.ಐ. ಬ್ಯಾಂಕ್ ಶಾಖೆ ಎಟಿಎಂನಲ್ಲಿ ಇಲ್ಲಿನ ಬೋಳೆಯ ವಿಜೇತ ಕಿಶೋರ ನಾಯಕ ಖಾತೆಯಿಂದ ಹಣ ಡ್ರಾ ಮಾಡಲು ತೆರಳಿದ್ದರು. ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವ ನಕಲಿ ಎಟಿಎಂ ನೀಡಿ ಪರಾರಿಯಾಗಿದ್ದರು. ಅಂಕೋಲಾದ ಬೇರೆ ಬ್ಯಾಂಕಿನ ಎಟಿಎಂ ಕೇಂದ್ರದಿಂದ ವಿಜೇತ ಅವರ ಮೂಲ ಎಟಿಎಂ ಕಾರ್ಡ್ ಮೂಲಕ ₹ 44,000 ಹಣ ತೆಗೆಯಲಾಗಿತ್ತು. ವಂಚನೆ ಗಮನಕ್ಕೆ ಬರುತ್ತಿದ್ದಂತೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸವಾಲಿನ ಪ್ರಕರಣವನ್ನು ಬೇಧಿಸಲು ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ, ಸಿಪಿಐ ಸಂತೋಷ ಶೆಟ್ಟಿ ಮುಂದಾಳತ್ವದಲ್ಲಿ ಪಿಎಸ್ಐ ಪ್ರವೀಣಕುಮಾರ್, ಪಿಎಸ್ಐ ಪ್ರೇಮನಗೌಡ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು. ಪ್ರಕರಣ ಬೆನ್ನಟ್ಟಿದ ತನಿಖಾ ತಂಡ ಮೊದಲು ಎಟಿಎಂ ಕೇಂದ್ರದ ಸುತ್ತಮುತ್ತ ಪ್ರಕರಣ ನಡೆದ ದಿನ ಸಂಚರಿಸಿದ ವಾಹನಗಳ ಮಾಹಿತಿ ಕಲೆಹಾಕಿದ್ದರು. ಆರೋಪಿ ಕುಂದಾಪುರದ ಕಾಪುವಿನ ಬಳಿ ಇನ್ನೊಂದು ಎಟಿಎಂ ಮೂಲಕ ಹಣ ಡ್ರಾ ಮಾಡಿದ ಸುಳಿವು ದೊರೆತಿತ್ತು. ಎರಡು ಸ್ಥಳದಲ್ಲಿ ಕಂಡು ಬಂದ ಬಿಳಿ ಬಣ್ಣದ ಕಾರು ಪತ್ತೆಯಾಗಿತ್ತು.ಹೊನ್ನಾವರದ ಹೊಳೆಗದ್ದೆ ಟೋಲ್ ಗೇಟ್ ಬಳಿಯ ಸಿಸಿಟಿವಿ ದೃಶ್ಯಾವಳಿ ಮೂಲಕ ಕಾರು ಮುಂಬೈ ಮೂಲದ್ದು ಎಂದು ತಿಳಿದುಬಂದಿದೆ.

ADVERTISEMENT

ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದ ಆರೋಪಿ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪದೇ ಪದೇ ಮೊಬೈಲ್ ಸಿಮ್ ಬದಲಾವಣೆ ಮಾಡುವ ಮೂಲಕ ಪೊಲೀಸರ ದಿಕ್ಕುತಪ್ಪಿಸುತ್ತಿದ್ದ. ಮುಂಬೈಗೆ ತೆರಳಿದ ಪೊಲೀಸರು ಆರೋಪಿ ವಿಜಯ್ ಅಂಗಪ್ರಸಾದ್ ದ್ವಿವೇದಿಯನ್ನು ಪಶ್ಚಿಮ ಮುಂಬೈನ ಕುರ್ಲಾದಲ್ಲಿ ಬಂಧಿಸಿ ₹ 42,000 ನಗದು ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಂತರರಾಜ್ಯ ಕಳ್ಳನನ್ನು ಪತ್ತೆಮಾಡಿ, ಬಂಧಿಸಿ, ವಂಚನೆ ಮಾಡಿದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.