ಬಂಧನ
(ಪ್ರಾತಿನಿಧಿಕ ಚಿತ್ರ)
ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿಯಲ್ಲಿ ಈಚೆಗೆ ನಡೆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನಿಸಿ, ಬೆಂಕಿಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕು ಗೂಡಿನಬೈಲಿನ ಮಹ್ಮದ್ ರಫಿಕ್ ಇಸ್ಮಾಯಿಲ್, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕು ಚಾಲಕ ಗುಲ್ಜರ ಅಬ್ದಲ್ ರೆಹಮಾನ್ ಮುಕಾಂದಾರ್ ಮತ್ತು ಬೈಲಹೊಂಗಲದ ಮೊಡಕಾ ವ್ಯಾಪಾರಿ ಇಮ್ರಾನ್ ಕುತಬುದ್ದೀನ್ ತಿಗಡಿ ಬಂಧಿತರು.
‘ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿತ್ತು. ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿತರು ಸ್ವಿಪ್ಟ್ ಮಾದರಿಯ ಕಾರನ್ನು ಬಳಸಿರುವುದು ತಿಳಿಯಿತು. ಕಾರನ್ನು ಪತ್ತೆಹಚ್ಚಿದಾಗ ಬೆಳಗಾವಿಯ ಕಾಸಬಾಗ ವಾಲಿ ಚೌಕ ಹತ್ತಿರದ ವೋಡ್ಕಾಬಾರ್ ಹತ್ತಿರ ಇರುವ ಮಾಹಿತಿ ದೊರೆಯಿತು. ಆರೋಪಿಗಳನ್ನು ಹಿಡಿಯಲು ಬೆಳಗಾವಿಗೆ ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಆರೋಪಿ ಮಹ್ಮದ್ ರಫಿಕ್ ಇಸ್ಮಾಯಿಲ್ ಹಲ್ಲೆಗೆ ಯತ್ನಿಸಿದ. ನಂತರ ಆತ ತನಗೇ ತಾನೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ’ ಎಂದು ಯಲ್ಲಾಆಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಮತ್ತು ಸಿಬ್ಬಂದಿ ಶಫಿ ಶೇಖ್ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಮಹ್ಮದ್ ರಫಿಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ. ಸಿಬ್ಬಂದಿ ಗಾಯಗೊಂಡಿದ್ದಾರೆ. ಆರೋಪಿ ಮಹ್ಮದ್ ರಫಿಕ್ ಇಸ್ಮಾಯಿಲ್‌ನ ಮೇಲೆ ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.